ಮಂಗಳೂರು: ಟೆಲಿಫೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಯನ್ನು ಸ್ವಾಗತಿಸುವೆ. 2009 ರಲ್ಲಿ ಯಡಿಯೂರಪ್ಪ ಅವರು ಅಪ್ಪ ಮಗನನ್ನು ಜೈಲಿಗೆ ಕಳುಹಿಸುವೆ ಅಂದಿದ್ದರು. ಆ ನಂತರ ಏನಾಯಿತು ಅನ್ನೋದು ಜನತೆಗೆ ಗೊತ್ತಿದೆ. ದೇವೇಗೌಡರ ಕುಟುಂಬಕ್ಕೆ ಕಡಿವಾಣ ಹಾಕಲು ಯಡಿಯೂರಪ್ಪ ಅವರಿಗೆ ಹತ್ತು ಜನ್ಮ ಎತ್ತಿದರೂ ಸಾಧ್ಯವಿಲ್ಲವೆಂದು ಮಾಜಿ ಸಿಎಂ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ಧರ್ಮಸ್ಥಳದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಫೋನ್ ಕದ್ದಾಲಿಕೆ ಪ್ರಕರಣವನ್ನು ತನಿಖೆ ಮಾಡಲು ಸಿದ್ದರಾಮಯ್ಯ ಅವರು ಮಾಡಿದ ಮನವಿಗೆ ತಕ್ಷಣವೇ ಸ್ಪಂದಿಸಿದ ಯಡಿಯೂರಪ್ಪ ಅವರಿಗೆ ಸಿದ್ದರಾಮಯ್ಯ ಪರ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕಾಲೆಳೆದಿದ್ದಾರೆ. ಫೋನ್ ಕದ್ದಾಲಿಕೆ ಪ್ರಕರಣವನ್ನು ತನಿಖೆ ಮಾಡುವುದಿದ್ದರೆ ಹಿಂದಿನ ಯಡಿಯೂರಪ್ಪ, ಸಿದ್ದರಾಮಯ್ಯ ಮತ್ತು ನನ್ನ ಸರ್ಕಾರದ ಅವಧಿಯಲ್ಲಿ ನಡೆದ ಘಟನೆ ಗಳ ಬಗ್ಗೆಯೂ ತನಿಖೆ ಆಗಲಿ ಎಂದು ಆಗ್ರಹಿಸಿದರು.
ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ನನ್ನ ಹೆಸರನ್ನು ಕೆಲವು ಎಲೆಕ್ಟ್ರಾನಿಕ್ ಮಾಧ್ಯಮಗಳು ಎಳೆದು ತರುತ್ತಿವೆ. ಕುಮಾರಸ್ವಾಮಿ ಕಡೆ ಬೊಟ್ಟು ಮಾಡಲು ಸಾಧ್ಯವಿಲ್ಲ ಅನ್ನೋದನ್ನು ಅವರು ತಿಳಿದುಕೊಳ್ಳಬೇಕು. ನನ್ನ ಇಮೇಜ್ ಹಾಳು ಮಾಡಬೇಕೆಂದು ಎಷ್ಟೇ ಪ್ರಯತ್ನಪಟ್ಟರೂ ಸಾಧ್ಯವಿಲ್ಲ ಎಂದರು.
ಇನ್ನು ಪ್ರವಾಹ ಸಂತ್ರಸ್ತರಿಗೆ ಕೇಂದ್ರದ ನೆರವು ಘೋಷಿಸದ ಬಗ್ಗೆ ನಾನೇನು ಈಗ ಮಾತನಾಡುವುದಿಲ್ಲ. ಕೇಂದ್ರದ ತಂಡ ಬಂದು ವರದಿ ನೀಡಬೇಕಾಗಿದೆ. ಅಷ್ಟರ ತನಕ ಕಾಯುವೆ. ಆದರೆ 2010 ರಲ್ಲಿ ಯುಪಿಎ ಸರ್ಕಾರ ಇದ್ದಾಗ ಆಗಿನ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು 1 ಸಾವಿರ ಕೋಟಿ ನೀಡಿದ್ದರು. ಆದರೆ ಗೃಹ ಸಚಿವರು ವೈಮಾನಿಕ ಸಮೀಕ್ಷೆ ಮಾಡಿದ ಬಳಿಕವೂ ಕೇಂದ್ರ ಸರ್ಕಾರ ಇನ್ನೂ ಭರವಸೆ ಕೊಟ್ಟಿಲ್ಲ. ಇದನ್ನು ಜನರ ತೀರ್ಮಾನಕ್ಕೆ ಬಿಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.