ಮಂಗಳೂರು: ಸಾಮಾನ್ಯವಾಗಿ ಶಾಲಾ-ಕಾಲೇಜುಗಳ ತರಗತಿಗಳು ನಡೆಯುವುದು ಹಗಲಿನಲ್ಲಿ. ಕೆಲವು ಕಡೆ ಬೆಳಿಗ್ಗೆ ಇನ್ನು ಕೆಲವಡೆ ಸಂಜೆ ಕೂಡ ನಡೆಸುತ್ತಾರೆ. ಆದ್ರೆ, ನಗರದಲ್ಲಿ ಸ್ವಲ್ಪ ವಿಭಿನ್ನ ಎನ್ನುವಂತೆ ರಾತ್ರಿ ಶಾಲೆಯೊಂದನ್ನು ನಡೆಸಿಕೊಂಡು ಬರಲಾಗುತ್ತಿದೆ.
ಹೌದು, ಸ್ವಾತಂತ್ರ್ಯ ಪೂರ್ವದಲ್ಲಿ (1943 ) ಹುಟ್ಟಿಕೊಂಡ ನಗರದ ನವಭಾರತ್ ರಾತ್ರಿ ಪ್ರೌಢ ಶಾಲೆ ಇದೀಗ ಗಮನ ಸೆಳೆದಿದೆ. ಪ್ರಾಥಮಿಕ ಶಿಕ್ಷಣದಿಂದ ಹೈಸ್ಕೂಲ್ ತನಕ ಇಲ್ಲಿ ತರಗತಿ ನಡೆಯುತ್ತಿದ್ದು, ರೆಗ್ಯುಲರ್ ಶಿಕ್ಷಣ ಪಡೆಯಲಾಗದೇ ಶಿಕ್ಷಣದಿಂದ ವಂಚಿತರಾದ ಹಲವರಿಗೆ ಈ ವಿದ್ಯಾ ಸಂಸ್ಥೆ ಶಿಕ್ಷಣ ನೀಡುತ್ತಿದೆ.
ನವಭಾರತ್ ರಾತ್ರಿ ಪ್ರೌಢ ಶಾಲೆ ಕಳೆದ 76 ವರ್ಷಗಳಿಂದ ಇದೇ ರೀತಿ ತನ್ನ ಸೇವೆಯನ್ನು ಸಲ್ಲಿಸಿಕೊಂಡು ಬರುತ್ತಿದ್ದು, ದೇಶದ ಮೊದಲ ಮತ್ತು ರಾಜ್ಯದ ಏಕೈಕ ರಾತ್ರಿ ಪ್ರೌಢ ಶಾಲೆ ಎಂಬ ಹೆಗ್ಗಳಿಕೆ ಗಳಿಸಿದೆ. 1943ರಲ್ಲಿ 17 ವರ್ಷದ ಯುವಕರಾಗಿದ್ದಾಗ ಹಾಜಿ ಖಲಿದ್ ಮುಹಮ್ಮದ್ ಎಂಬುವರು ಇಲ್ಲಿ ಶಿಕ್ಷಣದಿಂದ ವಂಚಿತರಾಗಿರುವುದನ್ನು ಮನಗಂಡು ಈ ಶಾಲೆಯನ್ನು ಆರಂಭಿಸಿದರು. ಅಂದಿನಿಂದ ಇಂದಿನವರೆಗೂ ಈ ಶಾಲೆ ರೆಗ್ಯುಲರ್ ಶಿಕ್ಷಣ ಪಡೆಯಲಾಗದೆ ಶಿಕ್ಷಣದಿಂದ ವಂಚಿತರಾದವರಿಗೆ ಶಿಕ್ಷಣ ನೀಡುತ್ತಿದೆ.
ಇಲ್ಲಿ ಒಂದನೇ ತರಗತಿಯಿಂದ ಎಸ್ಎಸ್ಎಲ್ಸಿವರೆಗೆ ಶಿಕ್ಷಣ ನೀಡಲಾಗುತ್ತದೆ. 1943ರಿಂದ 1964ರವರೆಗೆ ಮದ್ರಾಸ್ ಶಿಕ್ಷಣ ಇಲಾಖೆಯ ಅಧೀನದಲ್ಲಿ ಪರೀಕ್ಷೆಗಳು ನಡೆಯುತ್ತಿದ್ದರೆ, 1964 ರಿಂದ ಕರ್ನಾಟಕ ಪ್ರೌಢ ಶಿಕ್ಷಣ ಇಲಾಖೆಯ ಅಧೀನದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗಳು ನಡೆಯುತ್ತಿವೆ.
ನವಭಾರತ್ ರಾತ್ರಿ ಪ್ರೌಢ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಡಾಕ್ಟರ್, ಎಂಜಿನಿಯರ್ ಸೇರಿದಂತೆ ಉತ್ತಮ ಹುದ್ದೆ ನಿರ್ವಹಿಸಿದ್ದಾರೆ. ಮೊದಲೆಲ್ಲ ಸ್ವಲ್ಪ ಮಟ್ಟಿನ ಶುಲ್ಕವನ್ನು ವಿದ್ಯಾರ್ಥಿಗಳಿಂದ ಸಂಗ್ರಹಿಸಲಾಗುತ್ತಿದ್ದರೂ ಇತ್ತೀಚಿನ ಕೆಲವು ವರ್ಷಗಳಿಂದ ಉಚಿತ ಶಿಕ್ಷಣ ನೀಡಲಾಗುತ್ತಿದೆ.
ಈ ರಾತ್ರಿ ಪ್ರೌಢ ಶಾಲೆಗೆ ಸರ್ಕಾರದ ಯಾವುದೇ ಅನುದಾನವಿಲ್ಲ. ಆದರೆ, ಶಿಕ್ಷಣ ಸಂಸ್ಥೆಗೆ ದಾನಿಗಳ ಮತ್ತು ಸಮಿತಿಗಳ ನೆರವಿನಿಂದ ಶಿಕ್ಷಕರಿಗೆ ನೀಡುವ ಸಂಬಳ, ಖರ್ಚುಗಳನ್ನು ಭರಿಸಲಾಗುತ್ತಿದೆ. ಸ್ವಂತ ಕಟ್ಟಡವನ್ನು ಕಟ್ಟಿ ಅದರಲ್ಲಿ ಅಂಗಡಿಗಳನ್ನು ಬಾಡಿಗೆಗೆ ನೀಡಿ ಖರ್ಚುಗಳನ್ನು ಸರಿದೂಗಿಸಲಾಗುತ್ತಿದೆ.
ಇದೀಗ ಈ ಪ್ರೌಢ ಶಾಲೆಯಲ್ಲಿ ಮೊದಲಿನಂತೆ ವಿದ್ಯಾರ್ಥಿಗಳ ಸಂಖ್ಯೆ ಇಲ್ಲದಿದ್ದರೂ ರೆಗ್ಯುಲರ್ ಶಾಲೆಗೆ ಹೋಗಲಾಗದೇ ಶಾಲೆಗೆ ವಿದ್ಯಾರ್ಜನೆಗೆ ಬರುವವರಿಗೆ ವಿದ್ಯಾದಾನ ನಡೆಯುತ್ತಿದೆ. ಇದರ ಜೊತೆಗೆ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿಯನ್ನು ಸಹ ನೀಡಲಾಗುತ್ತಿದೆ.
ಒಟ್ಟಿನಲ್ಲಿ ದೇಶದ ಮೊದಲ ರಾತ್ರಿ ಪ್ರೌಢ ಶಾಲೆ ಏಳೂವರೆ ದಶಕಗಳಿಂದ ಶಿಕ್ಷಣ ವಂಚಿತರಿಗೆ ವಿದ್ಯಾದಾನ ಮಾಡುತ್ತಿರುವುದರಿಂದ ಈ ಶಿಕ್ಷಣ ಸಂಸ್ಥೆ ಎಲ್ಲರ ಶ್ಲಾಘನೆಗೆ ಪಾತ್ರವಾಗಿದೆ.