ಕಡಬ: ದೇವಸ್ಥಾನ ಹಾಗೂ ಸರ್ಕಾರಿ ಶಾಲೆಗೆ ಸಂಪರ್ಕಿಸಲು ತೋಡು ದಾಟಲು ಇಲ್ಲಿ ಇಂದಿಗೂ ಅಡಿಕೆ ಪಾಲವೇ ಗತಿಯಾಗಿರುವ ಸ್ಥಿತಿ ಇಲ್ಲಿನ ಜನತೆಗಿದೆ.
ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ರೆಂಜಿಲಾಡಿ ಗ್ರಾಮದ ನೂಜಿಬೈಲ್ ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದ ಬಳಿ ಹರಿಯುತ್ತಿರುವ ತೋಡಿಗೆ ಸೇತುವೆ ನಿರ್ಮಿಸುವಂತೆ ಹಾಗೂ ಸರ್ವಋತು ಸಂಪರ್ಕ ರಸ್ತೆ ಅಭಿವೃದ್ಧಿಗೆ ಸಾರ್ವಜನಿಕರ ಆಗ್ರಹಕ್ಕೆ ಇನ್ನೂ ಮಾನ್ಯತೆ ದೊರೆತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ರೆಂಜಿಲಾಡಿ ಗ್ರಾಮದ ನೂಜಿಬೈಲ್ ದೈವಸ್ಥಾನದ ಬಳಿಯಲ್ಲಿರುವ ತೋಡು ಮಳೆಗಾಲದಲ್ಲಿ ತುಂಬಿ ಹರಿಯುತ್ತಿದ್ದು, ಕಲ್ಲುಗುಡ್ಡೆ-ಕಡ್ಯಕೊಣಾಜೆ ಭಾಗದಿಂದ ನೂಜಿ ರೆಂಜಿಲಾಡಿ ಅಂಗನವಾಡಿ, ಶಾಲೆಗೆ ಬರುವ ವಿದ್ಯಾರ್ಥಿಗಳು, ದೈವಸ್ಥಾನಕ್ಕೆ ಬರುವ ಭಕ್ತರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಮಳೆಗಾಲದಲ್ಲಿ ತೋಡಿಗೆ ತಾತ್ಕಲಿಕ ಮರದ ಪಾಲ ನಿರ್ಮಾಣ ಮಾಡಿದ್ದು, ಮಕ್ಕಳು, ವೃದ್ಧರು ಭಯದಿಂದಲೇ ಇದರಲ್ಲಿ ಸಂಚರಿಸಬೇಕಾಗಿದೆ. ಪೋಷಕರು ಮಳೆಗಾಲದಲ್ಲಿ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಬಂದು ಮಕ್ಕಳನ್ನು ಪಾಲ ದಾಟಿಸಬೇಕಾದ ಪರಿಸ್ಥಿತಿ ಈ ಭಾಗದ ಜನರದ್ದಾಗಿದೆ. ಇಲ್ಲಿ ಸೇತುವೆ ಇಲ್ಲದೇ ಇರುವುದರಿಂದ ನೂಜಿ-ರೆಂಜಿಲಾಡಿ ಶಾಲೆಗೆ ಬರುವ ಮಕ್ಕಳು ದೂರದ ಶಾಲೆಗಳಿಗೆ ತೆರಳುತ್ತಿದ್ದು, ಮಕ್ಕಳ ಸಂಖ್ಯೆ ಕಡಿಮೆಗೊಳ್ಳುವ ಭೀತಿಯನ್ನು ಶಾಲಾ ಸಮಿತಿಯವರು ತೋಡಿಕೊಂಡಿದ್ದಾರೆ.
ನೂಜಿ-ರೆಂಜಿಲಾಡಿ ಅಂಗನವಾಡಿ, ಶಾಲೆಗೆ ನಿತ್ಯ ಎಳುವಾಲೆ, ಮಾರಪ್ಪೆ, ಕೊಣಾಜೆ ಇತರೆಡೆಯಿಂದ ಸುಮಾರು ವಿದ್ಯಾರ್ಥಿಗಳು ತೆರಳುತ್ತಿದ್ದಾರೆ. ಪ್ರಸಿದ್ಧ ಧಾರ್ಮಿಕ ಕ್ಷೇತ್ರವು ಇರುವ ನೂಜಿ ದೈವಸ್ಥಾನದ ಬಳಿ ಹರಿಯುತ್ತಿರುವ ತೋಡಿಗೆ ಸೇತುವೆ ನಿರ್ಮಿಸುವಂತೆ ಹಲವು ವರ್ಷಗಳಿಂದ ಸ್ಥಳೀಯರು ಆಗ್ರಹಿಸುತ್ತಿದ್ದಾರೆ. ಬೇಸಿಗೆಯಲ್ಲಿ ತೋಡಿನಲ್ಲಿ ನೀರಿಲ್ಲದೇ ಇರುವುದರಿಂದ ಆ ಸಂದರ್ಭದಲ್ಲಿ ತೋಡಿಗೆ ಮಣ್ಣು ಹಾಕಿ ಸಂಚಾರಕ್ಕೆ ಅನುಕೂಲ ಮಾಡಲಾಗುತ್ತದೆ. ಮಳೆಗಾಲದಲ್ಲಿ ತೊಂದರೆ ಪಡುವ ಸ್ಥಿತಿ ಇಲ್ಲಿಯದಾಗಿದ್ದು, ಸೇತುವೆ ನಿರ್ಮಾಣವಾದಲ್ಲಿ ಸಾರ್ವಜನಿಕರು ಪಡುತ್ತಿರುವ ಸಂಕಷ್ಟದಿಂದ ಮುಕ್ತಿ ಪಡೆಯಬಹುದು ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಕಲ್ಲುಗುಡ್ಡೆ ಮಾವಿನಕಟ್ಟೆಯಿಂದ ರೆಂಜಿಲಾಡಿ ನೂಜಿಬೈಲ್ ದೈವಸ್ಥಾನದ ರಸ್ತೆ ಡಾಂಬರೀಕರಣಗೊಂಡಿದ್ದು, ದೇವಸ್ಥಾನದ ಬಳಿಯಿಂದ ಕಲ್ಲುಗುಡ್ಡೆ-ಕಡ್ಯಕೊಣಾಜೆ ಸಂಪರ್ಕ ರಸ್ತೆಯವರೆಗೆ ಸುಮಾರು 400 ಮೀಟರ್ ರಸ್ತೆಯಲ್ಲಿ ಮಾತ್ರ ಸಂಕಷ್ಟ ಎದುರಾಗಿದೆ. ಪ್ರಸಿದ್ಧ ಕ್ಷೇತ್ರ ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನ 10 ವರ್ಷಗಳ ಹಿಂದೆ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವ ನಡೆದಿದ್ದು, ಅಂದಿನಿಂದ ಇಲ್ಲಿಗೆ ದೂರದೂರಿನಿಂದ ಭಕ್ತಾಧಿಗಳು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಆಗಮಿಸುತ್ತಿದ್ದು, ತಿಂಗಳಿಗೆ ಸುಮಾರು ಒಂದು ಸಾವಿರಕ್ಕೂ ಅಧಿಕ ಭಕ್ತರು ಇಲ್ಲಿಗೆ ಭೇಟಿ ಕೊಡುತ್ತಿರುತ್ತಾರೆ.
ಇನ್ನು ಸದ್ರಿ ತೋಡಿಗೆ ಸೇತುವೆ ನಿರ್ಮಿಸುವುದರೊಂದಿಗೆ, ರಸ್ತೆಯನ್ನು ಅಭಿವೃದ್ಧಿ ಪಡಿಸಿದ್ದಲ್ಲಿ ಕೊಣಾಜೆ ಭಾಗದಿಂದ ಬರುವ ಭಕ್ತಾದಿಗಳಿಗೂ, ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಸಂಬಂಧಪಟ್ಟವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.