ಪುತ್ತೂರು: ಬಿಜೆಪಿಯ ಭೀಷ್ಮ, ಕರಾವಳಿಯ ವಾಜಪೇಯಿ ಎಂದೇ ಹೆಸರಿಸಲ್ಪಟ್ಟಿದ್ದ ಹಿರಿಯ ರಾಜಕೀಯ ಧುರೀಣ, ಪುತ್ತೂರಿನ ಮಾಜಿ ಶಾಸಕ ಉರಿಮಜಲು ಕೆ. ರಾಮ ಭಟ್ ಅವರ ಅಂತಿಮ ಯಾತ್ರೆಯು ಮಂಗಳವಾರ ಸಾವಿರಾರು ಅಭಿಮಾನಿಗಳ ಹಾಗೂ ಪಕ್ಷದ ಕಾರ್ಯಕರ್ತರ ಸಮ್ಮುಖದಲ್ಲಿ ಸಕಲ ಗೌರವಗಳೊಂದಿಗೆ ನಡೆಯಿತು. ಪುತ್ತೂರು ಮಡಿವಾಳ ಕಟ್ಟೆ ಸ್ಮಶಾನದಲ್ಲಿ ಬೆಳಗ್ಗೆ 11 ಗಂಟೆಗೆ ಅಗ್ನಿಸ್ಪರ್ಷದೊಂದಿಗೆ ಅಂತ್ಯ ಸಂಸ್ಕಾರ ನಡೆಸಲಾಯಿತು.
ಬೆಳಗ್ಗೆ 8 ಗಂಟೆಯ ವೇಳೆಗೆ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿ ಕೊಂಬೆಟ್ಟಿನಲ್ಲಿನ ಸ್ವಗೃಹದಿಂದ ಅವರ ಪಾರ್ಥಿವ ಶರೀರವನ್ನು ವಿವೇಕಾನಂದ ಕಾಲೇಜ್‌ಗೆ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು. ಅಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಯಿತು. ಹಾಗೂ ಅಲ್ಲಿ ನುಡಿ ನಮನ ಸಲ್ಲಿಸಲಾಯಿತು. ಬಳಿಕ ಬೈಪಾಸ್ ಮೂಲಕ ಪುತ್ತೂರು ನಗರರಕ್ಕೆ ಆಗಮಿಸಿ ಕೋ ಆಪರೇಟ್ ಟೌನ್ ಬ್ಯಾಂಕ್ ಆವರಣದಲ್ಲಿ ಬೆಳಗ್ಗೆ 9.30 ರಿಂದ 11 ಗಂಟೆಯ ತನಕ ಸಾರ್ವಜನಿಕ ದರ್ಶನಕ್ಕೆ ಇರಿಸಲಾಯಿತು. ಈ ಸಂದರ್ಭದಲ್ಲಿ ಗಣ್ಯರಿಂದ ನುಡಿ ನಮನ ಸಲ್ಲಿಸಲಾಯಿತು.
ಪುಷ್ಪಾಲಂಕೃತ ವಾಹನದಲ್ಲಿ ಅಂತಿಮ ಯಾತ್ರೆ: ಪುಷ್ಪಾಲಂಕೃತ ವಾಹನದಲ್ಲಿ ರಾಮ ಭಟ್ ಅವರ ಪಾರ್ಥಿವ ಶರೀರವನ್ನು ಅವರ ನಿವಾಸದಿಂದ ವಿವೇಕಾನಂದ ಕಾಲೇಜ್ ಮತ್ತು ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್ ತನಕ ಸುಮಾರು 6 ಕೀಲೋ ಮೀಟರ್ ಮೆರವಣಿಗೆಯಲ್ಲಿ ಸಾಗಿಸಲಾಯಿತು. ಬಳಿಕ ರುದ್ರಭೂಮಿಗೆ ಕೊಂಡೊಯ್ದು, ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ :
ಅಂತ್ಯ ಸಂಸ್ಕಾರಕ್ಕೆ ಸರ್ಕಾರಿ ಗೌರವ ಸಲ್ಲಿಸಿದರು. ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್ ಅವರಣದಲ್ಲಿ ಪಾರ್ಥಿವ ಶರೀರವನ್ನು ಇಟ್ಟು ಪೊಲೀಸ್ ಇಲಾಖೆಯಿಂದ ಮೂರು ಸುತ್ತಿನ ಕುಶಾಲು ತೋಪು ಹಾರಿಸುವ ಮೂಲಕ ಗೌರವ ಸಲ್ಲಿಸಲಾಯಿತು.
ಗಣ್ಯರಿಂದ ಅಂತಿಮ ನಮನ :
ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಕೋಟ ಶ್ರೀನಿವಾಸ ಪೂಜಾರಿ, ಡಾ. ಪ್ರಭಾಕರ ಭಟ್ ಕಲ್ಲಡ್ಕ, ಶಾಸಕ ಸಂಜೀವ ಮಠಂದೂರು ಸೇರಿದಂತೆ ಅನೇಕ ಗಣ್ಯರು ಅಂತಿಮ ದರ್ಶನ ಪಡೆದರು.
ಇದನ್ನೂ ಓದಿ : ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಪುತ್ತೂರಿನ ಮಾಜಿ ಶಾಸಕ ರಾಮ್ ಭಟ್