ಮಂಗಳೂರು: ಪೋಕ್ಸೋ, ದಲಿತ ದೌರ್ಜನ್ಯ ಕಾಯಿದೆ ಅಡಿ ಯುವಕನೊಬ್ಬನ ವಿರುದ್ಧ ಪ್ರಕರಣ ದಾಖಲಿಸಿ, ಸರ್ಕಾರದಿಂದ ಪರಿಹಾರ ಧನ ಪಡೆದಿದ್ದ ಯುವತಿ, ಬಳಿಕ ಪ್ರತಿಕೂಲ ಸಾಕ್ಷಿ ನುಡಿದ ಹಿನ್ನೆಲೆಯಲ್ಲಿ ಮಂಗಳೂರಿನ ಒಂದನೇ ಹೆಚ್ಚುವರಿ ಹಾಗೂ ಜಿಲ್ಲಾ ತ್ವರಿತಗತಿಯ ನ್ಯಾಯಾಲಯ ಪರಿಹಾರ ಮೊತ್ತ ವಾಪಸ್ ನೀಡಬೇಕು ಎಂದು ತೀರ್ಪು ನೀಡಿದೆ.
ಸಂತ್ರಸ್ತೆಗೆ ಆದ ಅನ್ಯಾಯಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾದ ಸಂದರ್ಭ 1.25 ಲಕ್ಷ ರೂ ಹಾಗೂ ದೋಷಾರೋಪಣಾ ಪತ್ರ ಸಲ್ಲಿಸಿದ ಸಂದರ್ಭ 2.5 ಲಕ್ಷ ರೂ ಪರಿಹಾರ ಧನವನ್ನು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಮಂಜೂರು ಮಾಡಿ, ಸಂತ್ರಸ್ತೆಯು ಅಪ್ರಾಪ್ತಳಾಗಿದ್ದ ಹಿನ್ನೆಲೆಯಲ್ಲಿ ಆಕೆಯ ಚಿಕ್ಕಮ್ಮನ ಖಾತೆಗೆ ಜಮಾ ಮಾಡಿದ್ದರು. ಆದರೆ, ಸಂತ್ರಸ್ತೆ ಪ್ರತಿಕೂಲ ಸಾಕ್ಷಿ ಹೇಳಿದ ಕಾರಣ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಸಂತ್ರಸ್ತೆಗೆ ನೀಡಿದ 3.75 ಲಕ್ಷ ರೂ ಪರಿಹಾರದ ಆದೇಶ ಪ್ರತಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ವಿಚಾರಣೆ ಮಾಡಿದ ತನಿಖಾಧಿಕಾರಿ ಸಾಕ್ಷ್ಯ ಆಧರಿಸಿ, ಪರಿಹಾರ ಮೊತ್ತವನ್ನು ಸರ್ಕಾರಕ್ಕೆ ಹಿಂದಿರುಗಿಸಬೇಕು ಎಂದು ಮನವಿ ಮಾಡಿದ್ದರು.
ಈ ಕುರಿತು ನ್ಯಾಯಾಲಯ ಪ್ರಕರಣದ ವಿಚಾರವನ್ನು ಪರಿಗಣಿಸಿ, 2023ರ ಡಿ.26ರಂದು ಸಂತ್ರಸ್ತ ಯುವತಿಗೆ ವಿತರಿಸಲಾಗಿದ್ದ ಪರಿಹಾರದ ಮೊತ್ತವನ್ನು ಉಪ ನಿರ್ದೇಶಕರು ವಸೂಲಿ ಮಾಡಿ ಈ ಕುರಿತು ನ್ಯಾಯಾಲಯಕ್ಕೆ ವರದಿ ನೀಡುವಂತೆ ನಿರ್ದೇಶನ ನೀಡಿತ್ತು. ಜನವರಿ 4ರಂದು ಇಲಾಖಾ ಉಪನಿರ್ದೇಶಕರು 3.75 ಲಕ್ಷ ರೂಪಾಯಿಯನ್ನು ಸಂತ್ರಸ್ತೆಯ ಚಿಕ್ಕಮ್ಮನಿಂದ ವಸೂಲಾತಿ ಮಾಡಿ, ಜಿಲ್ಲಾಧಿಕಾರಿ ಮತ್ತು ಉಪನಿರ್ದೇಶಕರ ಜಂಟಿ ಖಾತೆಗೆ ಮರುಜಮೆ ಮಾಡಿದ್ದಾರೆ.
ಏನಿದು ಪ್ರಕರಣ?: ಕಳೆದ ವರ್ಷ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಣಂಬೂರು ಸಹಾಯಕ ಪೊಲೀಸ್ ಆಯುಕ್ತ ಮನೋಜ್ ಕುಮಾರ್ ನಾಯಕ್ ಅವರು ಆರೋಪಿ ಮಂಜಪ್ಪ (23) ವಿರುದ್ಧ ಪೋಕ್ಸೋ ಕಾಯಿದೆ, ದೌರ್ಜನ್ಯ ತಡೆ ಕಾಯಿದೆ ಅಡಿ ಪ್ರಕರಣ ದಾಖಲಿಸಿ, 39 ಸಾಕ್ಷಿದಾರರ ವಿಚಾರಣೆಯನ್ನೂ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.
ನ್ಯಾಯಾಧೀಶೆ ಮಂಜುಳಾ ಅವರು ವಿಚಾರಣೆ ನಡೆಸಿದ್ದು, ಈ ವೇಳೆ ಸಂತ್ರಸ್ತೆ ಮತ್ತು ಆಕೆಯ ಕಡೆಯವರು ಪ್ರತಿಕೂಲ ಸಾಕ್ಷಿ ಹೇಳಿದ್ದರು. ಇದರಿಂದ ಆರೋಪಿ ದೋಷಮುಕ್ತಗೊಂಡಿದ್ದ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ್ ನಾಯಕ್ ವಾದ ಮಂಡಿಸಿದ್ದರು. ಆದರೆ, ಇದಕ್ಕೂ ಮುನ್ನ ಆಕೆಗೆ ಪರಿಹಾರದ ಮೊತ್ತ ಜಮೆ ಆಗಿತ್ತು. ಹೀಗಾಗಿ ಆರೋಪಿ ದೋಷಮುಕ್ತಗೊಂಡ ಬಳಿಕ ಇಲಾಖೆ ಪರಿಹಾರ ನೀಡಿದ ಮೊತ್ತವನ್ನು ಮರುಪಾವತಿಗೆ ಮನವಿ ಮಾಡಿತ್ತು. ಇದಾದ ಬಳಿಕ ನಡೆದ ಪ್ರಕ್ರಿಯೆಯಲ್ಲಿ ಹಣ ಮರುಪಾವತಿಯಾಗಿದೆ.
ಇದನ್ನೂ ಓದಿ: ದಾವಣಗೆರೆ: ಅಪ್ರಾಪ್ತೆಯ ಅತ್ಯಾಚಾರ, ಅಪರಾಧಿಗೆ 20 ವರ್ಷ ಶಿಕ್ಷೆ