ಸುಳ್ಯ : ಇಲ್ಲಿನ ಪಯಸ್ವಿನಿ ನದಿಯಲ್ಲಿ ನಿನ್ನೆ ತೆಪ್ಪ ಮಗುಚಿ ನೀರು ಪಾಲಾಗಿದ್ದ ಯುವಕನ ಮೃತದೇಹವು ಅವಘಡ ಸಂಭವಿಸಿದ ಸನಿಹದಲ್ಲೇ ಪತ್ತೆಯಾಗಿದೆ.
ನೀರು ಪಾಲಾದ ಯುವಕನನ್ನು ಕನಕಮಜಲು ನಿವಾಸಿ ಹರೀಶ್ ಮಳಿ ಎಂಬುವರ ಪುತ್ರ ಅಶ್ವಿತ್ ಎಂದು ಗುರುತಿಸಲಾಗಿದೆ. ಯುವಕ ತನ್ನ ಸ್ನೇಹಿತನೊಂದಿಗೆ ಶನಿವಾರದಂದು ಪಯಸ್ವಿನಿ ನದಿಗೆ ತೆರಳಿ ತೆಪ್ಪದ ಮೂಲಕ ಸ್ವಲ್ಪ ದೂರ ಹೋಗಿ ದಡಕ್ಕೆ ಬಂದಿದ್ದರೆನ್ನಲಾಗಿದೆ. ಬಳಿಕ ಅಶ್ವಿತ್ ಓರ್ವನೇ ತೆಪ್ಪದಲ್ಲಿ ಹೋಗುತ್ತಿದ್ದಾಗ ಬ್ಯಾಲೆನ್ಸ್ ತಪ್ಪಿ ಮಗುಚಿ ಬಿದ್ದು ನೀರು ಪಾಲಾಗಿದ್ದಾರೆ.
ಬಳಿಕ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ, ಮುಳುಗು ತಜ್ಞರು ಸ್ಥಳಕ್ಕಾಗಮಿಸಿ ಮೃತದೇಹದ ಪತ್ತೆ ಕಾರ್ಯ ಆರಂಭಿಸಿದ್ದರು. ರಾತ್ರಿಯಾಗಿದ್ದರಿಂದ ಬೆಳಕಿನ ವ್ಯವಸ್ಥೆ ಪತ್ತೆ ಕಾರ್ಯಕ್ಕೆ ಅಡ್ಡಿಯಾಗಿತ್ತು. ಮತ್ತೆ ಇಂದು ಬೆಳಗ್ಗೆ ಹುಡುಕಾಟ ಆರಂಭಿಸಿದ್ದು, ಮೃತದೇಹ ತೆಪ್ಪ ಮಗುಚಿದ ಜಾಗದ ಸನಿಹದಲ್ಲೇ ದೊರೆತಿದೆ.