ಮಂಗಳೂರು: ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಗ್ರಾಮವಾಸ್ತವ್ಯ ನಿಜವಾಗಿ ಮೆಚ್ಚವ ಸಂಗತಿ. ಆದರೆ ನೀವು ಹೊನ್ನಾಳಿಯ ದಯಾನತ್ ಖಾನ್ ಮನೆಯಲ್ಲಿ ಗ್ರಾಮವಾಸ್ತವ್ಯ ಮಾಡಿ. ಚಾಮರಾಜನಗರದ ಗುಂಡ್ಲುಪೇಟೆಯ ದಲಿತ ಯುವಕ ಪ್ರತಾಪ್ ಮನೆಯಲ್ಲಿ ಗ್ರಾಮವಾಸ್ತವ್ಯ ಮಾಡಿ ಅವರ ಸಾವು, ಅವಮಾನಗಳಿಗೆ ನ್ಯಾಯ ಕೊಡಿಸಲು ಸಿದ್ಧರಾಗಿ ಎಂದು ಎಸ್ಡಿಪಿಐ ದ.ಕ.ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಸವಾಲೆಸೆದರು.
ದೇಶಾದ್ಯಂತ ಮುಸ್ಲಿಂ-ದಲಿತರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಎಸ್ಡಿಪಿಐ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ಇಂದು ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ದಾವಣಗೆರೆಯ ಹೊನ್ನಾಳಿಯ ದಯಾನತ್ ಖಾನ್ ಎಂಬಾತ ಅಜ್ಮೀರ್ ದರ್ಗಾದ ಹಸಿರು ಬಾವುಟವನ್ನು ವಾಟ್ಸ್ ಆ್ಯಪ್ ಸ್ಟೇಟಸ್ ಹಾಕಿದ್ದಾನೆ ಎಂಬ ಕಾರಣಕ್ಕಾಗಿ ಗುಂಪೊಂದು ಥಳಿಸಿ, ಹಿಂಸೆ ಮಾಡಿ ಕೊಲೆ ಮಾಡಿತು. ಅದೇ ರೀತಿ ಗುಂಡ್ಲುಪೇಟೆಯ ಪ್ರತಾಪ್ ಎಂಬ ದಲಿತನನ್ನು ಅಮಾನವೀಯವಾಗಿ ಥಳಿಸಿ ಬೆತ್ತಲೆ ಮೆರವಣಿಗೆ ಮಾಡಲಾಯಿತು. ಇಷ್ಟೆಲ್ಲ ಆದರೂ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಸರಕಾರ ಪರಸ್ಪರ ಆರೋಪ-ಪ್ರತ್ಯಾರೋಪಕ್ಕೆ ಮಾತ್ರ ಸೀಮಿತವಾಗಿದೆ.
ದೇಶದಾದ್ಯಂತ ಕಳೆದ ಹಲವಾರು ವರ್ಷಗಳಿಂದ ಭಯಭೀತಿಯ ವಾತಾವರಣ ಸೃಷ್ಟಿಸಿ,ಪ್ರಗತಿಪರರನ್ನು ಹಿಂಸಾತ್ಮಕವಾಗಿ ಕೊಲ್ಲುವ ಮೂಲಕ ಭಯಾನಕರ ಪರಿಸ್ಥಿತಿಯಲ್ಲಿ ಜೀವನ ನಡೆಸುವ ಸ್ಥಿತಿ ಬಂದಿದೆ. ಇದನ್ನು ಗಮನಿಸಿದರೆ ಹೇಗೆ ಜರ್ಮನಿಯಲ್ಲಿ ಹಿಟ್ಲರ್ ಆಡಳಿತ ಇತ್ತೋ ಅದೇ ರೀತಿ ಈಗ ಭಾರತದಲ್ಲಿ ಆಡಳಿತ ನಡೆಸುತ್ತಿದ್ದಾರೆ ಎಂದು ಇಕ್ಬಾಲ್ ಬೆಳ್ಳಾರೆ ಹೇಳಿದರು.