ಕಡಬ (ದಕ್ಷಿಣ ಕನ್ನಡ): ಸಿಕ್ಕಿಂ ಯುವಕನೊಬ್ಬ ಮೇಘಾಲಯದ ಬಾಲಕಿಯ ಜೊತೆ ಓಡಿ ಬಂದು ಕಡಬದ ಕುಂತೂರಿನಲ್ಲಿ ವಾಸವಾಗಿ ಜೀವನ ನಡೆಸುತ್ತಿದ್ದರು. ಆದ್ರೆ ನಮ್ಮ ಮಗಳನ್ನು ಅಪಹರಿಸಿಕೊಂಡು ಹೋಗಿದ್ದಾರೆ ಎಂದು ಬಾಲಕಿ ಪೋಷಕರು ನೀಡಿದ ದೂರಿನ ಮೇರೆಗೆ ರಾಜ್ಯಕ್ಕೆ ಬಂದ ಸಿಕ್ಕೀಂ ಪೊಲೀಸರು ಇಬ್ಬರನ್ನು ವಾಪಸ್ ಕರೆದುಕೊಂಡು ಹೋದ ಘಟನೆ ಬೆಳಕಿಗೆ ಬಂದಿದೆ.
ಏನಿದು ಘಟನೆ: ಮೇಘಾಲಯದ ನಾರ್ತ್ ಗ್ಯಾರೋ ಹಿಲ್ಸ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾಲಕಿ ಸಿಕ್ಕೀಂ ರಾಜ್ಯದ ಗ್ಯಾಂಗ್ಟನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ತನ್ನ ಅಜ್ಜಿ ಮನೆಯಲ್ಲಿ ವಾಸಿಸುತ್ತಿದ್ದಳು. ಅಜ್ಜಿಯ ಮನೆ ಬಳಿ ಯುವಕ ಸುಶೀಲ್ನ ಕುಟುಂಬ ವಾಸವಾಗಿತ್ತು. ಬಾಲಕಿ ಮತ್ತು ಸುಶೀಲ್ ಮಧ್ಯೆ ಪರಿಚಯ ಬೆಳೆದಿದೆ. ಪರಿಚಯ ಪ್ರೀತಿಗೆ ತಿರುಗಿದೆ. ಈ ವಿಷಯ ಮನೆಯಲ್ಲಿ ತಿಳಿದರೆ ಅನಾಹುತ ನಡೆಯಬಹುದೆಂದು ತಿಳಿದ ಈ ಜೋಡಿ ಮನೆಬಿಟ್ಟು, ಜಿಲ್ಲೆಯ ಕಡಬ ತಾಲೂಕಿನ ಕುಂತೂರಿಗೆ ಬಂದು ಜೀವನ ಸಾಗಿಸುತ್ತಿದ್ದರು ಎನ್ನಲಾಗಿದೆ.
ಕಿಡ್ಯ್ಯಾಪ್ ಕೇಸ್: ಜನವರಿ 28ರಂದು ನಮ್ಮ ಮಗಳನ್ನು ಸುಶೀಲ್ ಎಂಬಾತ ಅಪಹರಿಸಿದ್ದಾನೆ ಎಂದು ಗ್ಯಾಂಗ್ಟನ್ ಪೊಲೀಸ್ ಠಾಣೆಯಲ್ಲಿ ಬಾಲಕಿಯ ಪೋಷಕರು ದೂರು ದಾಖಲಿಸಿದ್ದರು. ಭಾರತೀಯ ದಂಡ ಸಂಹಿತೆ 363 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿದ್ದರು. ನೆಟ್ವರ್ಕ್ ಆಧಾರದ ಮೇಲೆ ಸಿಕ್ಕೀಂ ಪೊಲೀಸರಿಗೆ ಬಾಲಕಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಆಲಂಕಾರು ಪ್ರದೇಶದಲ್ಲಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು.
ಬಾಲಕಿ ಗುರುತು ಪತ್ತೆ: ಬಾಲಕಿ ಪತ್ತೆ ಹಚ್ಚಿದ್ದ ಸಿಕ್ಕೀಂ ಪೊಲೀಸರು ಕೂಡಲೇ ಕಡಬ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ಸಿಕ್ಕಿಂ ಪೊಲೀಸ್ ಮಹಿಳಾ ಇನ್ಸ್ಪೆಕ್ಟರ್ ಶಿಲೋಶನಾ ಶರ್ಮಾ ನೇತೃತ್ವದ ಪೊಲೀಸರ ತಂಡ ಕಡಬ ಪೊಲೀಸ್ ಠಾಣಾಧಿಕಾರಿ ರುಕ್ಮ ನಾಯ್ಕ್ ಅವರ ಸಹಕಾರದೊಂದಿಗೆ ಕುಂತೂರಿನ ಆಲಂಕಾರುನಲ್ಲಿದ್ದ ಬಾಲಕಿ ಸ್ಥಳಕ್ಕೆ ಕರೆದೊಯ್ದಿದ್ದರು. ಬಾಲಕಿಯನ್ನು ರಕ್ಷಿಸಿದ ಸಿಕ್ಕಿಂ ಪೊಲೀಸರು ಯುವಕನನ್ನು ಬಂಧಿಸಿ ತಮ್ಮ ರಾಜ್ಯಕ್ಕೆ ಕರೆದೊಯ್ದಿದ್ದಾರೆ.
ಮುಂದುವರಿದ ತನಿಖೆ: ಯುವಕ ಆಲಂಕಾರು ಎಂಬಲ್ಲಿ ಹೋಟೆಲ್ ಒಂದರಲ್ಲಿ ಫಾಸ್ಟ್ಫುಡ್ ತಯಾರಿಸುವ ಕೆಲಸ ಮಾಡುತ್ತಿದ್ದನು. ಇಬ್ಬರನ್ನೂ ಸಿಕ್ಕೀಂಗೆ ಕರೆದೊಯ್ದಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಈ ಜೋಡಿ ಸಮರ್ಪಕ ಮಾಹಿತಿ ನೀಡದೆ ಕೆಲಸಕ್ಕೆ ಸೇರಿಕೊಂಡಿದೆ. ಜೋಯಿ ಹಾಗೂ ಮಾಯ ಎಂದು ಪರಿಚಯಿಸಿಕೊಂಡಿದ್ದು, ಯುವಕ ಬೆಂಗಳೂರು ಮೂಲದವನು ಹಾಗೂ ಹುಡುಗಿ ಕೋಲ್ಕತ್ತಾದವಳು ನಾವು ದಂಪತಿಗಳು ಎಂದು ತಿಳಿಸಿ ಮಾಲೀಕರಿಂದ ಕೆಲಸ ಪಡೆದುಕೊಂಡಿದ್ದರು. ಹಾಗೂ ಯಾವುದೇ ದಾಖಲೆ ಪತ್ರಗಳನ್ನು ನೀಡದೆ ಕುಂತೂರು ಕೋಚಕಟ್ಟೆಯಲ್ಲಿ ವಾಸ್ತವ್ಯಕ್ಕೆ ಕೊಠಡಿ ಬಾಡಿಗೆ ಪಡೆದುಕೊಂಡಿದ್ದರು.
ಸಮರ್ಪಕ ದಾಖಲೆ ಪತ್ರಗಳನ್ನು ಪಡೆಯದೆ ಅಪರಿಚಿತರನ್ನು ಕೆಲಸಕ್ಕೆ ಸೇರಿಸಿಕೊಳ್ಳುವುದು ಹಾಗೂ ವಾಸ್ತವ್ಯಕ್ಕೆ ಕೊಠಡಿ ಬಾಡಿಗೆಗೆ ನೀಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಇಂತಹ ಅಪರಿಚಿತರು ಯಾವುದಾದರು ಆಹಿತರ ಘಟನೆಗೆ ಕಾರಣಕರ್ತರಾದರೆ ಯಾರು ಹೊಣೆ. ಈ ಬಗ್ಗೆ ಪೊಲೀಸರು ಕೆಲಸ ನೀಡುವ ಅಂಗಡಿ ಮಾಲೀಕರು ಹಾಗೂ ಕೊಠಡಿ ನೀಡುವ ಕಟ್ಟಡ ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಸಾರ್ವಜನಿಕವಾಗಿ ಕೇಳಿ ಬರುತ್ತಿದೆ.
ಇದನ್ನೂ ಓದಿ: ಶೋರೂಮ್ನಲ್ಲಿ ಅಗ್ನಿ ಅವಘಡ: 40ಕ್ಕೂ ಹೆಚ್ಚು ರಾಯಲ್ ಎನ್ ಫೀಲ್ಡ್ ಬೈಕ್ ಬೆಂಕಿಗಾಹುತಿ