ಬೆಳ್ತಂಗಡಿ: ಸುಮಾರು ಒಂದು ವರ್ಷದಿಂದ ಸರ್ಕಾರಿ ಜಾಗದಲ್ಲಿ ವಾಸ್ತವ್ಯ ಹೂಡಿರುವ ಅಸಹಾಯಕ ಬಡ ಮಹಿಳೆಯನ್ನು ಬೆಳ್ತಂಗಡಿ ತಾಲೂಕು ಆಡಳಿತ ಒಕ್ಕಲೆಬ್ಬಿಸಲು ಮುಂದಾಗಿದೆ ಎನ್ನವ ಆರೋಪ ಕೇಳಿ ಬಂದಿದೆ.
ವೇಣೂರು ಹೋಬಳಿಯ ನಾರಾವಿ ಪಂಚಾಯತ್ ವ್ಯಾಪ್ತಿಯಲ್ಲಿರುವ ನಾರಾವಿ ಪೇಟೆಯಿಂದ 1 ಕಿ.ಮೀ. ದೂರದಲ್ಲಿನ ಮರೋಡಿ ರಸ್ತೆಯ ಹಟ್ಯಡ್ಕ ಎಂಬಲ್ಲಿ ಇರುವ ಸರ್ಕಾರಿ ಜಾಗದಲ್ಲಿ ಒಂದು ವರ್ಷಗಳಿಂದೀಚೆಗೆ ವನಜಾ ಎಂಬುವರು ಮನೆ ಮಾಡಿಕೊಂಡು ವಾಸವಾಗಿದ್ದಾರೆ. ಇವರು ಅನಕ್ಷರಸ್ಥೆಯಾಗಿದ್ದು, ಪತಿ ರಮೇಶ್ ಎಂಬುವರು ಅನಾರೋಗ್ಯ ಪೀಡಿತರಾಗಿದ್ದಾರೆ. ವನಜಾ ಕೂಲಿ ಕೆಲಸ ಮಾಡಿಕೊಂಡು ತನ್ನ ಇಬ್ಬರು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದಾರೆ.
ಈ ಹಿಂದೆ ಇವರು ನಾರಾವಿಯಲ್ಲಿ ಬಾಡಿಗೆ ಮನೆಯಲ್ಲಿದ್ದರು. ಬಾಡಿಗೆ ಕೊಡಲಾಗದೆ ಇಲ್ಲಿಗೆ ಬಂದು ನೆಲೆ ಕಂಡುಕೊಂಡಿದ್ದಾರೆ. ಆದರೆ ಈಗ ಯಾರೋ ಅಕ್ಕಪಕ್ಕದವರು ಇವರನ್ನು ಇಲ್ಲಿಂದ ಕಳುಹಿಸಬೇಕೆಂಬ ಕುತಂತ್ರದಿಂದ ತಾಲೂಕು ಆಡಳಿತಕ್ಕೆ 2018ರ ನ. 21ರಂದು ದೂರು ನೀಡಿದ್ದಾರೆ. ಬಳಿಕ ಡಿ. 13ರಂದು ತಾಲೂಕಾಡಳಿತ ಈ ಜಾಗದಿಂದ ಹೋಗುವಂತೆ ನೋಟಿಸ್ ನೀಡಿದ್ದು, ವನಜಾ ಅವರು ತಹಸೀಲ್ದಾರ್‍ರನ್ನು ಕಂಡು ಈ ಕುರಿತು ಮಾತನಾಡಿದ್ದರು.
ಆದರೆ ತಹಸೀಲ್ದಾರ್ ವರ್ಗಾವಣೆ ಹೊಂದಿದ್ದು, ಪ್ರಕರಣ ಅಲ್ಲಿಗೆ ಸ್ಥಗಿತಗೊಂಡಿತ್ತು. ಆದರೆ ಹೊಸದಾಗಿ ಬಂದ ತಹಸೀಲ್ದಾರ್ ವನಜಾ ಅವರ ಸ್ಥಿತಿಗತಿಯನ್ನು ತಿಳಿದೂ ಈ ರೀತಿ ಕಠಿಣವಾಗಿ ವರ್ತಿಸುತ್ತಿದ್ದು, ಇವರ ಆದೇಶದ ಅನ್ವಯದಂತೆ ಸ್ಥಳೀಯ ಗ್ರಾಮ ಕರಣಿಕರು ಹಾಗೂ ಮಣೆಗಾರರು ಮನೆಗೆ ಬಂದು ಇಲ್ಲಿಂದ ಕೂಡಲೇ ಹೋಗಬೇಕು. ನಮಗೆ ಬಹಳ ಒತ್ತಡ ಇದೆ. ನೀವು ಈ ಜಾಗ ಬಿಡದಿದ್ದರೆ ಜೆಸಿಬಿ ತಂದು ಎಬ್ಬಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಇದರಿಂದ ವನಜಾ ಏನು ಮಾಡಬೇಕು ಎಂದು ದಿಕ್ಕು ತೋಚದೆ ಕಂಗಾಲಾಗಿದ್ದಾರೆ. ತಾಲೂಕು ಆಡಳಿತದ ನಡೆಯಿಂದಾಗಿ ಅವರು ಕೂಲಿ ಕೆಲಸಕ್ಕೆ ಹೋಗಲು ಹಿಂಜರಿಯುತ್ತಿದ್ದಾರೆ. ಮಕ್ಕಳನ್ನು ಮನೆಯಲ್ಲೇ ಬಿಟ್ಟು ಕೆಲಸಕ್ಕೆ ಹೋದರೆ ಏನಾದರೂ ಆದೀತು ಎಂಬ ಹೆದರಿಕೆಯಿಂದ ಮನೆಯಲ್ಲೇ ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದು, ಮುಂದಿನ ದಾರಿ ಕಾಣದೆ ಕಂಗಾಲಾಗಿದ್ದಾರೆ.