ಸುಬ್ರಹ್ಮಣ್ಯ: ಕೊರೊನಾ ಕಾರಣದಿಂದಾಗಿ ಕಳೆದ ಹಲವಾರು ದಿನಗಳಿಂದ ದೇವರ ದರ್ಶನಕ್ಕೆ ಕಡಿವಾಣ ಹಾಕಲಾಗಿದ್ದು, ಭಕ್ತರಿಗೆ ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ರಾಜ್ಯದ ದೇವಾಲಯಗಳು ಸೋಮವಾರದಿಂದ ದೇವರ ದರ್ಶನ ಭಾಗ್ಯ ನೀಡಲು ಸಜ್ಜಾಗಿವೆ.
ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಲಾಕ್‍ಡೌನ್‍ನಿಂದಾಗಿ ಬಂದ್ ಆಗಿದ್ದ ರಾಜ್ಯದ ಪ್ರತಿಷ್ಠಿತ ಕುಕ್ಕೆ ಸುಬ್ರಹ್ಮಣ್ಯ ದೇಗುಲವು ಜೂ.8 ರಿಂದ ತೆರೆಯಲಿದ್ದು, ಇದಕ್ಕಾಗಿ ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗುತ್ತಿದೆ. ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ಭಕ್ತರ ಆಗಮನದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಸ್ವಚ್ಛತೆಗೆ ಆದ್ಯತೆ ನೀಡಿ, ಪೂಜಾ ವಿಧಿ ವಿಧಾನಗಳಿಗಾಗಿ ದೇವಾಲಯವನ್ನು ಅಣಿಗೊಳಿಸಲಾಗುತ್ತಿದೆ.
ಸಾಮಾಜಿಕ ಅಂತರ ಕಾಯ್ದುಕೊಂಡು, ಸರ್ಕಾರದ ಹಾಗೂ ಆರೋಗ್ಯ ಇಲಾಖೆಯ ಮಾರ್ಗಸೂಚಿ ಅನ್ವಯ ದೇವಾಲಯದಲ್ಲಿ ದರ್ಶನ ಮತ್ತಿತರೆ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಬೇಕೆಂಬ ಹಿನ್ನೆಲೆಯಲ್ಲಿ ಅದಕ್ಕೆ ಪೂರಕವಾಗುವಂತೆ ಎಲ್ಲಾ ಕ್ರಮಗಳನ್ನೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾಡಿಕೊಳ್ಳಲಾಗುತ್ತಿದೆ. ದೇವಸ್ಥಾನ, ಸೇವಾ ಕೌಂಟರ್ ಗಳು ಸೇರಿದಂತೆ ಎಲ್ಲಾ ಕಡೆಗಳಲ್ಲಿ ಸ್ಯಾನಿಟೈಸರ್ ಮಾಡಲಾಗುತ್ತಿದೆ.