ಮಂಗಳೂರು: ಕೇರಳದಲ್ಲಿ ಕೊರೊನಾ ಸೋಂಕು ಪ್ರಕರಣ ಹೆಚ್ಚುತ್ತಿದ್ದು, ರಾಜ್ಯದಲ್ಲಿ ಎರಡನೇ ಅಲೆಯು ತಹಬದಿಗೆ ಬರುತ್ತಿರುವ ಕಾರಣ ರಾಜ್ಯ ಗೃಹಸಚಿವರು ಕೇರಳ ಗಡಿಭಾಗಗಳಲ್ಲಿ ಕಠಿಣ ತಪಾಸಣೆ ನಡೆಸುವಂತೆ ಆದೇಶಿಸಿದ್ದು ಕೆಲವು ಹೊಸ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ಡಿಸಿಪಿ ಹರಿರಾಂ ಶಂಕರ್ ಹೇಳಿದರು.
ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಾತನಾಡಿದ ಅವರು, ಮಂಗಳೂರು ನಗರ ವ್ಯಾಪ್ತಿಯ ಕೇರಳ ಗಡಿ ಭಾಗದ ಆರು ಕಡೆಗಳಲ್ಲಿ ಪೊಲೀಸ್ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿ ಚೆಕ್ ಪೋಸ್ಟ್ಗಳನ್ನು ತೆರೆಯಲಾಗಿದೆ ಎಂದು ಹೇಳಿದರು.
ತಲಪಾಡಿಯ ಮುಖ್ಯದಾರಿ ಸೇರಿದಂತೆ ಇದೀಗ ನೆಕ್ಕಿಲಪದವು, ನಾರ್ಯಾ ಕ್ರಾಸ್, ನಂದಾರಪಡ್ಪು, ಕುದುಕರೆ ಕಟ್ಟೆ, ತೌಡುಗೋಳಿಯ ಐದು ಒಳದಾರಿಯಲ್ಲಿಯೂ ಚೆಕ್ ಪೋಸ್ಟ್ಗಳನ್ನು ತೆರೆಯಲಾಗಿದೆ. ಈ ಚೆಕ್ ಪೋಸ್ಟ್ಗಳಲ್ಲಿ ಕೊರೊನಾ ಸೋಂಕು ತಪಾಸಣೆ ಹಾಗೂ ಲಸಿಕೆ ಪಡೆದಿರುವ ಬಗ್ಗೆ ತಪಾಸಣೆ ನಡೆಸಿಯೇ ಬಳಿಕ ಮಂಗಳೂರು ಪ್ರವೇಶ ಮಾಡಲು ಅವಕಾಶ ನೀಡಲಾಗುತ್ತದೆ ಎಂದರು.
ಇಲ್ಲಿ ಮೂರು ಶಿಫ್ಟ್ಗಳಲ್ಲಿ ಕನಿಷ್ಟ 5-6 ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದ್ದು, ಪ್ರತಿ ಚೆಕ್ ಪೋಸ್ಟ್ಗೂ ಒಂದೊಂದು ಸಬ್ ಇನ್ಸ್ಪೆಕ್ಟರ್ ನಿಯೋಜನೆ ಮಾಡಲಾಗಿದೆ. ಅದೇ ರೀತಿ ಕಂಕನಾಡಿ ಹಾಗೂ ಅತ್ತಾವರ ರೈಲು ನಿಲ್ದಾಣಗಳಲ್ಲಿಯೂ ಸಿಬ್ಬಂದಿ ನೇಮಕ ಮಾಡಲಾಗಿದೆ. ಅಲ್ಲದೆ ಈ ರೈಲು ನಿಲ್ದಾಣ ಸೇರಿದಂತೆ ಆರು ಚೆಕ್ಪೋಸ್ಟ್ಗಳಿಗೂ ದಿನದ 24 ಗಂಟೆಗಳ ಕಾಲ ಆರೋಗ್ಯ ಸಿಬ್ಬಂದಿ ನಿಯೋಜನೆಗೆ ಡಿಎಚ್ಒ ಅವರಲ್ಲಿ ವಿನಂತಿ ಮಾಡಲಾಗಿದೆ. ಈ ಮೂಲಕ ಆರ್ಟಿಪಿಸಿಆರ್ ದಾಖಲೆ ಹಾಗೂ ಲಸಿಕೆ ಪಡೆದವರಿಗೆ ಮಾತ್ರ ಚೆಕ್ ಪೋಸ್ಟ್ ಮೂಲಕ ಮಂಗಳೂರು ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಡಿಸಿಪಿ ಹೇಳಿದರು.
ಆದರೆ ನಿತ್ಯ ಕೆಲಸದ ನಿಮಿತ್ತ ಓಡಾಡುವವರಿಗೆ, ವಿದ್ಯಾರ್ಥಿಗಳಿಗೆ ಪಾಸ್ಗಳನ್ನು ನೀಡಲಾಗಿದ್ದು, 14 ದಿನಗಳಿಗೆ ಒಂದು ಸಲದಂತೆ ಆ್ರ್ಟಿಪಿಸಿಆರ್ ವರದಿ ನೀಡುವ ವಿನಾಯಿತಿ ನೀಡಲಾಗಿದೆ. ಅಲ್ಲದೆ ಹಾಗೆಯೇ ಬಂದು ಹೋಗುವವರಿಗೆ 72 ಗಂಟೆಗಳ ಆರ್ಟಿಪಿಸಿಆರ್ ವರದಿ ನೀಡಬೇಕು ಎಂದು ಹೇಳಿದರು.