ಬೆಳ್ತಂಗಡಿ: ತಾಲೂಕಿನಲ್ಲಿ ಕೋವಿಡ್ ಪ್ರಕರಣಗಳು ವ್ಯಾಪಕವಾಗಿ ಹರಡುತ್ತಿರುವುದರಿಂದ ಸೋಂಕು ನಿಯಂತ್ರಣಕ್ಕಾಗಿ ಅಗತ್ಯ ಕಾನೂನು ಕ್ರಮ ಅನಿವಾರ್ಯವಾಗಿದೆ. ಹಾಗಾಗಿ ಸರ್ಕಾರದ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ವಹಿಸುವಂತೆ ಶಾಸಕ ಹರೀಶ್ ಪೂಂಜ ಸೂಚಿಸಿದರು.
ತಾಲೂಕಿನಲ್ಲಿ ಕೋವಿಡ್ ಪರಿಶೀಲನೆ ಹಾಗೂ ನಿಯಂತ್ರಣದ ಬಗ್ಗೆ ಬೆಳ್ತಂಗಡಿ ತಾಪಂ ಸಭಾಂಗಣದಲ್ಲಿ ಸೆ. 30ರಂದು ವಿವಿಧ ಅಧಿಕಾರಗಳ ಜೊತೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಸಭೆ ಸಮಾರಂಭಗಳಿಗೆ, ವಿವಾಹ, ಶುಭ ಕಾರ್ಯಗಳಿಗೆ, ದೇವಸ್ಥಾನ, ಚರ್ಚ್, ಮಸೀದಿಗಳಲ್ಲಿ ನಿಯಮಿತ ಜನಕ್ಕಷ್ಟೇ ಅವಕಾಶ ಕಲ್ಪಿಸುವ ಸಲುವಾಗಿ ಗ್ರಾಮ ಮಟ್ಟದಲ್ಲಿ ಕಾರ್ಯಪಡೆಯೊಂದಿಗೆ ಸಭೆ ನಡೆಸಿ ಅಗತ್ಯ ಕ್ರಮ ವಹಿಸಲಾಗುವುದು. ಹಿರಿಯ ನಾಗರಿಕರು, ಬಾಣಂತಿಯರು, ವಿಶೇಷಚೇತನರನ್ನು ಪರೀಕ್ಷೆಗೊಳಪಡಿಸಬೇಕು. ಗ್ರಾಪಂ ಮಟ್ಟದಲ್ಲಿ ಜಾಗೃತಿ ಅಭಿಯಾನ ಕೈಗೊಳ್ಳಲಾಗುವುದು. ಸರ್ಕಾರದ ಸೂಚನೆ ಕಟ್ಟುನಿಟ್ಟಾಗಿ ಪಾಲಿಸದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ವಹಿಸುವಂತೆ ಅವರು ಸೂಚಿಸಿದರು.
ಮಾರ್ಚ್ನಿಂದ ಈವರೆಗೆ ಕೊರೊನಾ ತಡೆಗಟ್ಟುವಲ್ಲಿ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ ಕೊರೊನಾ ವಾರಿಯರ್ಸ್ ಶ್ರಮವನ್ನು ಅಭಿನಂದಿಸಿದರು. ಈಗಾಗಲೇ ಶ್ರೀ.ಕ್ಷೇ.ಧ. ಹಳೇ ಟಿ.ಬಿ. ಆಸ್ಪತ್ರೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸುವ ಮೂಲಕ ರಾಜ್ಯದಲ್ಲೇ ಮಾದರಿ ಕಾರ್ಯ ತಾಲೂಕಿನಿಂದಾಗಿದೆ. ಈವರೆಗೆ 155 ಜನ ರೋಗಲಕ್ಷಣ ರಹಿತ ಕೋವಿಡ್ ಪಾಸಿಟಿವ್ ಬಂದ ವ್ಯಕ್ತಿಗಳು ದಾಖಲಾಗಿದ್ದಾರೆ. ಈ ಪೈಕಿ 144 ಮಂದಿ ಹಾಗೂ ತಾಲೂಕು ಆಸ್ಪತ್ರೆಯಲ್ಲಿ ದಾಖಲಾದ 67 ಮಂದಿ ಸೋಂಕಿತರು ಗುಣಮುಖರಾಗಿ ತೆರಳಿದ್ದಾರೆ ಎಂದು ತಿಳಿಸಿದ್ದಾರೆ.
ಪುತ್ತೂರು ಸಹಾಯಕ ಆಯುಕ್ತ ಡಾ. ಯತೀಶ್ ಉಳ್ಳಾಲ್ ಮಾತನಾಡಿ, ಬೆಳ್ತಂಗಡಿ ತಾಲೂಕು ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದಿದ್ದಲ್ಲಿ, ಅಂತರ ಕಾಯ್ದುಕೊಳ್ಳದೆ ವ್ಯವಹಾರ ನಡೆಸುವವರಿಗೆ ದಂಡ ಹಾಗೂ ಸಭೆ, ಸಮಾರಂಭಗಳಲ್ಲಿ ಸೀಮಿತ ಜನ ಸೇರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳವ ಬಗ್ಗೆ ಸಭೆಯಲ್ಲಿ ನಿರ್ಣಯಿಸಿದ ವಿಚಾರಗಳನ್ನು ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಾಗುವುದು. ಕೋವಿಡ್ ನಿಯಂತ್ರಣ ಕ್ರಮ, ಕೋವಿಡ್ ಪರೀಕ್ಷೆ ನಡೆಸುವ ಉದ್ದೇಶ ಕುರಿತಾಗಿ ಜಿಲ್ಲಾಧಿಕಾರಿ ಸೂಚನೆಯಂತೆ ಈಗಾಗಲೆ ಗ್ರಾಪಂ ವ್ಯಾಪ್ತಿಯಲ್ಲಿ ಆಡಳಿತಾಧಿಕಾರಿ ಮೂಲಕ ಕರಪತ್ರ ಹಂಚುವ ಕಾರ್ಯ ನಡೆಯಲಿದೆ ಎಂದರು.