ಪುತ್ತೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ ಆಗಬೇಕೆಂಬ ಗುರಿ ನಮ್ಮದಾಗಿತ್ತು. ಇವರೆಲ್ಲರೂ ಲಾಕ್ಡೌನ್ ಹಾಗೂ ಮಳೆಗಾಲದ ಸಂಕಷ್ಟದ ನಡುವೆಯೂ ಮನೆಯಲ್ಲಿ ಸಾಕಷ್ಟು ಪ್ರಯತ್ನ ಪಟ್ಟು ಓದಿದ್ದು, ಪರೀಕ್ಷೆಯಲ್ಲಿ ಯಶಸ್ವಿಯಾಗಲಿದ್ದಾರೆ ಎಂದು ಶಾಸಕ ಸಂಜೀವ ಮಠಂದೂರು ಭರವಸೆ ವ್ಯಕ್ತಪಡಿಸಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷಾ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಮನೆಯಲ್ಲೇ ಇರುವ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಕೋಚಿಂಗ್ ಪಡೆಯುತ್ತಿದ್ದಾರೆ. ಅದಕ್ಕಾಗಿ 10 ದಿನದ ಹಿಂದೆ ಎಲ್ಲ ಪ್ರೌಢ ಶಾಲಾ ಮುಖ್ಯಶಿಕ್ಷಕರ ಸಭೆ ಕರೆದು ಚರ್ಚಿಸಿದ್ದೆವು. ತರಗತಿ ಮಾಡಲು, ವಿಶೇಷ ತರಗತಿ ಮಾಡಲು ಅವಕಾಶವಿಲ್ಲದಿದ್ದರೂ ಎಲ್ಲ ಮಕ್ಕಳು ಮನೆಯಲ್ಲೇ ಕುಳಿತು ಪರೀಕ್ಷಾ ತಯಾರಿ ಅಭ್ಯಾಸ ಮಾಡಿದ್ದಾರೆ ಎಂದರು.
ಈ ನಿಟ್ಟಿನಲ್ಲಿ ನೂರಕ್ಕೆ ನೂರು ಫಲಿತಾಂಶ ಬರುವ ನಂಬಿಕೆ ಇದೆ ಎಂದ ಅವರು, ಪರೀಕ್ಷೆಗಳು ಹೆಚ್ಚಾಗಿ ಬೇಸಿಗೆಯಲ್ಲೇ ನಡೆಯುತ್ತದೆ. ಆದರೆ, ಈ ಭಾರಿ ಕೋವಿಡ್‌ನಿಂದಾಗಿ ಮಳೆಗಾಲದಲ್ಲಿ ಪರೀಕ್ಷೆ ನಡೆಯುತ್ತದೆ. ಮಳೆಗಾಲದಲ್ಲಿ ಏನೇನು ಸುರಕ್ಷತೆ ಮಾಡಬೇಕು. ಅದರತ್ತ ಗಮನ ಹರಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಿಗೆ ಹೋಗಲು ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆ ಮಾಡಲಾಗುವುದು ಎಂದ ಅವರು, ತಾಲೂಕಿನ ಗಡಿ ಭಾಗದ ಮಕ್ಕಳು ಸಮಯಕ್ಕೆ ಸರಿಯಾಗಿ ಬರುವಂತೆ ಆಯಾ ಶಾಲೆಯ ಶಿಕ್ಷಕರು ಜವಾಬ್ದಾರಿ ವಹಿಸಬೇಕು. ಎಲ್ಲ ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಸೂಚಿಸಿದರು.
ಪರೀಕ್ಷಾ ಕೇಂದ್ರದಲ್ಲಿ ಜನಜಂಗುಳಿ ಬೇಡ: ಕೋವಿಡ್-19 ನಿಂದಾಗಿ ಮಕ್ಕಳಿಗೆ ಮತ್ತು ಮಕ್ಕಳಿಗಿಂತ ಹೆತ್ತವರಿಗೆ ಭಯದ ವಾತಾವರಣ ಇದೆ. ಈ ದೃಷ್ಟಿಯಿಂದ ಹೆತ್ತವರೇ ಮಕ್ಕಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಬರುತ್ತಾರೆ. ಈ ಸಂದರ್ಭದಲ್ಲೂ ನಾವು ಎಚ್ಚರಿಕೆಯಿಂದ ಇರಬೇಕು. ಪರೀಕ್ಷಾ ಕೇಂದ್ರದಲ್ಲಿ ಜನಜಂಗುಳಿ ಆಗದಂತೆ ಎಚ್ಚರ ವಹಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಮೂಲ ಸೌಲಭ್ಯ ಗಮನಿಸಿ: ಕೋವಿಡ್ -19ಗೆ ಸರ್ಕಾರ ಏನು ಸುರಕ್ಷತೆ ದೃಷ್ಟಿಯಿಂದ ಮಾರ್ಗದರ್ಶನ ಮಾಡಿದೆಯೋ ಅದೇ ರೀತಿ ಯಾವೆಲ್ಲ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ ಮತ್ತು ಮುಂದೆ ಏನೆಲ್ಲ ಆಗಬೇಕೆಂಬ ಕುರಿತು ಪಟ್ಟಿ ಮಾಡಿ ಕೊಡಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚಿಸಿದರು.
ಮುನ್ನೆಚ್ಚರಿಕೆ ಕ್ರಮ: ಕೋವಿಡ್ -19 ಹಿನ್ನೆಲೆ ಆರಂಭದಲ್ಲೇ ಪರೀಕ್ಷಾ ಕೊಠಡಿಯನ್ನ ಸ್ಯಾನಿಟೈಸ್ ಮಾಡಲಾಗುತ್ತದೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳನ್ನು ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗುತ್ತದೆ. ಯಾವುದೇ ಸಂದರ್ಭದಲ್ಲಿ ಕೆಲಸ ಕಾರ್ಯಗಳಿಗೆ ಬೇಕಾಗುವಂತೆ ಪರೀಕ್ಷಾ ಕೇಂದ್ರದ ಪಕ್ಕದ ಶಾಲೆಯಲ್ಲಿ 10 ಶಿಕ್ಷಕರು ರಿಸರ್ವ್ ಆಗಿ ಇರುತ್ತಾರೆ. ಈಗಾಗಲೇ ಮಕ್ಕಳಿಗೆ ಮಾಸ್ಕ್ ಕೊಡುವ ಕುರಿತು ಸುಮಾರು 4 ಸಾವಿರ ಮಾಸ್ಕ್ಗಳನ್ನು ಸೇವಾ ಸಂಸ್ಥೆಯವರು ಪ್ರಾಯೋಜಿಸಿದ್ದಾರೆ. ಜೊತೆಗೆ ಎಲ್ಲ ಕೊಠಡಿಗಳಿಗೂ ಜನರೇಟರ್, ಸಿ.ಸಿ.ಕ್ಯಾಮರಾ ಅಳವಡಿಕೆ ಮಾಡಲಾಗಿದೆ ಎಂದು ಬಿಇಒ ಸಿ.ಲೋಕೇಶ್ ಸಭೆಯಲ್ಲಿ ಪ್ರಸ್ತಾಪ ಮಾಡಿದರು.
ಹೊರ ಜಿಲ್ಲೆಯ 37 ವಿದ್ಯಾರ್ಥಿಗಳು ಪುತ್ತೂರಿಗೆ: ತಾಲೂಕಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೊರ ಜಿಲ್ಲೆಯ ತಾಲೂಕಿನ ವಿದ್ಯಾರ್ಥಿಗಳೂ ಇದ್ದಾರೆ. ಈ ಪೈಕಿ 37 ಮಂದಿ ಪುತ್ತೂರಿನಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಪುತ್ತೂರಿನಲ್ಲಿ ಕಲಿಯುತ್ತಿದ್ದ 252 ಮಂದಿ ವಿದ್ಯಾರ್ಥಿಗಳು ಹೊರ ಜಿಲ್ಲೆಯ ತಾಲೂಕಿನಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಆ ವಿದ್ಯಾರ್ಥಿಗಳಿಗೆ ಈಗಾಗಲೇ ನಮ್ಮ ಮತ್ತು ಅಲ್ಲಿನ ಕ್ಷೇತ್ರ ಶಿಕ್ಷಣಧಿಕಾರಿಗಳ ಜೊತೆ ಕಮ್ಯುನಿಕೇಷನ್ ಮಾಡಲಾಗಿದ್ದು, ಅವರಿಗೆ ಹಾಲ್ ಟಿಕೆಟ್ ಕೊಡಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಬಿಇಒ ಸಿ.ಲೋಕೇಶ್ ಹೇಳಿದರು.
ಗಡಿ ಭಾಗದಿಂದ 70 ವಿದ್ಯಾರ್ಥಿಗಳು: ಕೇರಳ ಗಡಿ ಭಾಗದ 4 ಕಡೆಗಳಿಂದ 70 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಅವರಿಗೆ ಪ್ರತ್ಯೇಕ ಬಸ್, ವಾಹನದ ವ್ಯವಸ್ಥೆಯನ್ನು ಆಯಾ ಶಾಲೆಯ ಕಡೆಯಿಂದ ಮಾಡಲಾಗಿದೆ. ಗಡಿ ಭಾಗದ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವಂತೆ ನಮ್ಮ ಕಡೆಯಿಂದ ಒಬ್ಬ ಶಿಕ್ಷಕರನ್ನು ಅಲ್ಲಿ ನಿಯೋಜಿಸಲಾಗಿದೆ. ಒಟ್ಟು ಅಲ್ಲಿ 11 ಶಾಲೆಯ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿರುವುದರಿಂದ 11 ಶಿಕ್ಷಕರನ್ನು ಅಲ್ಲಿ ನಿಯೋಜಿಸಲಾಗಿದೆ. ಒಟ್ಟು 5007 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲಿದ್ದಾರೆ ಎಂದು ತಿಳಿಸಿದರು.