ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರದ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನಮ್ನ ದೇವರಗುಡ್ಡೆ ಮಠದಲ್ಲಿ ಕ್ಷೇತ್ರದ ಮಠಾಧಿಪತಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪ್ರಥಮ ಚಾತುರ್ಮಾಸ ವ್ರತದ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ ಪಾದಪೂಜೆಯನ್ನು ಸಲ್ಲಿಸಿದರು.
ಚಾತುರ್ಮಾಸದ ಸಂದರ್ಭ ಭಕ್ತಾಧಿಗಳಿಗೆ ಆಶೀರ್ವಚನ ನೀಡಿದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು, ಲೋಕ ಕಲ್ಯಾಣಾರ್ಥಕ್ಕಾಗಿ ನಾವು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು. ನಂಬಿಕೆ, ವಿಶ್ವಾಸದಿಂದ ಜೀವನ ಮಾಡಬೇಕು. ಎಲ್ಲರಲ್ಲೂ ಭಗವಂತನ ಅಂಶ ಇದೆ. ಗುಣಾತ್ಮಕ ಚಿಂತನೆ ಬೆಳೆಸಿಕೊಳ್ಳಬೇಕು. ನಾವೆಲ್ಲರೂ ಸನಾತನ ಹಿಂದೂ ಧರ್ಮದಲ್ಲಿ ಹುಟ್ಟಿದ್ದೇವೆ. ಇಂದಿನ ಪವಿತ್ರ ಕಾಲದಲ್ಲಿ ಅಯೋಧ್ಯೆಯಲ್ಲಿ ಸುಮೂಹೂರ್ತದಲ್ಲಿ ಪ್ರಭು ಶ್ರೀ ರಾಮಚಂದ್ರನ ಮಂಗಲ ಕಾರ್ಯ ನಡೆದಿದೆ ಎಂದರು.
ಭಗವಂತನ ಆರಾಧನೆಯ ಮೂಲಕ ಹೆಚ್ಚೆಚ್ಚು ದೇವರ ಹತ್ತಿರ ಹೋಗುವ ಕೆಲಸ ಮಾಡಬೇಕು. ಸತ್ಯಶೀಲರಾಗಿ ಅನನ್ಯ ಚಿಂತನೆ ಮಾಡಬೇಕು. ರಾಮರಾಜ್ಯದ ಕಲ್ಪನೆ ಸಾಕಾರವಾಗುತ್ತದೆ. ಮಠದ ಎಲ್ಲಾ ಶಾಖಾ ಮಠಗಳ ಉದ್ದೇಶ ರಾಮನ ಸಂದೇಶ ಬಿತ್ತರಿಸುವುದು. ನನ್ನ ಗುರುಗಳ ಸಂಕಲ್ಪವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದರು.
ಪಾದಪೂಜೆ ಸಲ್ಲಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜ, ಚಾತುರ್ಮಾಸ ವ್ರತ ಆಚರಣೆಯಲ್ಲಿರುವ ಶ್ರೀಗಳು ಹಿಂದೂ ಸಮಾಜದ ಉನ್ನತ್ತಿಗಾಗಿ ಚಿಂತನೆ ನಡೆಸುತ್ತಿರುತ್ತಾರೆ. ನಮ್ಮ ಎಲ್ಲಾ ಕಾರ್ಯಗಳಿಗೂ ಸದಾ ಮಾರ್ಗದರ್ಶನ ನೀಡುತ್ತಿದ್ದಾರೆ. ಅಯೋಧ್ಯೆಯ ಶ್ರೀರಾಮ ಮಂದಿರದ ಪುಣ್ಯಕಾರ್ಯದ ದಿನದಂದು ಮಠದಲ್ಲಿ ಚಾತುರ್ಮಾಸ ವ್ರತವನ್ನು ಕೈಗೊಂಡು. ಇಲ್ಲಿ ಸೀತಾರಾಮ ದೇವರ ಪ್ರತಿಷ್ಠಾಪನೆ ಹಾಗೂ ಬ್ರಹ್ಮ ಶ್ರೀ ನಾರಾಯಣ ಗುರುಗಳ ಪ್ರತಿಷ್ಠಾಪನೆ ನೆರವೇರಿಸಿದ್ದಾರೆ. ಇಂತಹ ಪುಣ್ಯದ ಕಾರ್ಯದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿರುವುದು ನಮ್ಮೆಲ್ಲರಿಗೂ ಭಾಗ್ಯ ಎಂದರು.