ಪುತ್ತೂರು : ಮೀನ ಸಂಕ್ರಮಣ ದಿನವಾದ ಇಂದು ಬೆಳಗ್ಗೆ ಇಲ್ಲಿನ ರೈಲ್ವೆ ನಿಲ್ದಾಣದ ಬಳಿಯ ಶ್ರೀದೇವಿ ಬೆಟ್ಟದಲ್ಲಿರುವ ಶ್ರೀ ಮಹಾಲಕ್ಷ್ಮಿ ಕ್ಷೇತ್ರದಲ್ಲಿ ಸೂರ್ಯನ ಕಿರಣ ಶ್ರೀ ಮಹಾಲಕ್ಷ್ಮಿ ಬಿಂಬವನ್ನು ಸ್ಪರ್ಶಿಸಿತು. ಈ ಸಂದರ್ಭವನ್ನು ಅನೇಕ ಭಕ್ತರು ಕಣ್ತುಂಬಿಕೊಂಡರು.
ಪ್ರತಿ ವರ್ಷ ಮೀನ ಸಂಕ್ರಮಣದಂದು ಸೂರ್ಯರಶ್ಮಿ ಮಹಾಲಕ್ಷ್ಮಿ ಬಿಂಬವನ್ನು ಸ್ಪರ್ಶಿಸುತ್ತದೆ. ಇಂದು ಬೆಳಗ್ಗೆ 7:30ಕ್ಕೆ ಶ್ರೀ ದೇವಸ್ಥಾನದ ಧರ್ಮದರ್ಶಿ ಐತ್ತಪ್ಪ ಸಪಲ್ಯರು ದೇವಿಗೆ ಪೂಜೆ ನೆರವೇರಿಸಿದರು. ಬಳಿಕ ಭಕ್ತಾದಿಗಳಿಗೆ ಪ್ರಸಾದ ವಿತರಿಸಿದರು.
ದೇಶದ ಕೆಲವೇ ಕೆಲ ದೇವಸ್ಥಾನಗಳಲ್ಲಿ ಮೀನ ಸಂಕ್ರಮಣದಂದು ಇಂತಹ ಘಟನೆ ಕಾಣಸಿಗುತ್ತದೆ. ಕರ್ನಾಟಕದ ಎರಡು ದೇವಸ್ಥಾನಗಳಲ್ಲಿ ಸೂರ್ಯರಶ್ಮಿ ದೇವರ ಬಿಂಬವನ್ನು ಸ್ಪರ್ಶಿಸುತ್ತದೆ.
ಅದರಂತೆ ಪುತ್ತೂರಿನ ಶ್ರೀ ಮಹಾಲಕ್ಷ್ಮಿ ಕ್ಷೇತ್ರದಲ್ಲಿ ಮೂರು ಬಾಗಿಲುಗಳನ್ನು ದಾಟಿ ಸೂರ್ಯರಶ್ಮಿ ಶ್ರೀ ದೇವಿಯ ಬಿಂಬ ಸ್ಪರ್ಶಿಸುತ್ತದೆ. ಈ ಸಂದರ್ಭದಲ್ಲಿ ಇದನ್ನು ವೀಕ್ಷಿಸುವ ಭಕ್ತಾದಿಗಳ ಇಷ್ಟಾರ್ಥ ನೆರವೇರುತ್ತದೆ ಎಂಬ ನಂಬಿಕೆಯಿದೆ.
ಇದನ್ನೂ ಓದಿ: 'ಬಲೆ ತುಳು ಕಲ್ಪುಗ...'ತುಳು ಲಿಪಿ ಪರೀಕ್ಷೆ ಬರೆದು ಭಾಷಾ ಪ್ರೇಮ ತೋರಿದ 72ರ ನಿವೃತ್ತ ಶಿಕ್ಷಕಿ
ಈಗಾಗಲೇ ಈ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ. ಇದು ಸಂಪೂರ್ಣ ಶಿಲಾಮಯ ಕ್ಷೇತ್ರವಾಗಲಿದೆ. ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ದೇವಸ್ಥಾನದ ನಿರ್ಮಾಣ ಮುಂದಿನ ಎರಡು ವರ್ಷಗಳಲ್ಲಿ ಆಗಲಿದೆ. ಭಕ್ತಾದಿಗಳು ತನು-ಮನ-ಧನಗಳ ಸಹಕಾರ ನೀಡಬೇಕಾಗಿದೆ ಎಂದು ಭಕ್ತಾದಿಯೊಬ್ಬರು ತಿಳಿಸಿದರು.