ಮಂಗಳೂರು : ಮಂಗಳೂರು - ಮೈಸೂರು ನಡುವೆ ಇಂದು ವಿಮಾನಯಾನ ಸೇವೆ ಅರಂಭವಾಗಿದ್ದು, ಇದರ ಸವಿ ನೆನಪಿಗೆ ಅಂಚೆ ಇಲಾಖೆ ವಿಶೇಷ ಅಂಚೆ ಲಕೋಟೆ ರವಾನಿಸಿದೆ.
ಮೈಸೂರಿನಿಂದ ಬೆಳಗ್ಗೆ 11.20 ಕ್ಕೆ ಹೊರಟ ಅಲಯನ್ಸ್ ಏರ್ ವಿಮಾನ ಮಂಗಳೂರಿಗೆ 12.30 ಕ್ಕೆ ತಲುಪಿತು, ಇದರಲ್ಲಿ 78 ಪ್ರಯಾಣಿಕರು ಆಗಮಿಸಿದರು. ಈ ವಿಮಾನದಲ್ಲಿ ಮೈಸೂರಿನಿಂದ ಮಂಗಳೂರಿಗೆ ಅಂಚೆ ಇಲಾಖೆ ವಿಶೇಷ ಅಂಚೆ ಲಕೋಟೆ ರವಾನಿಸಿದೆ. ವಿಶೇಷ ಅಂಚೆ ಲಕೋಟೆಯನ್ನು ಫಿಲಾಟಲಿ ಚಟುವಟಿಕೆಯ ಉತ್ತೇಜನಕ್ಕೆ ಆರಂಭಿಸಲಾಗಿದೆ.
ಇದನ್ನೂ ಓದಿ : ಮೈಸೂರು-ಮಂಗಳೂರು ವಿಮಾನ ಸೇವೆಗೆ ಸಂಸದ ಪ್ರತಾಪ್ ಸಿಂಹ ಚಾಲನೆ
ಮೈಸೂರಿನಿಂದ ಮಂಗಳೂರಿಗೆ ಬಂದ ವಿಶೇಷ ಅಂಚೆ ಲಕೋಟೆಯನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಾಯಿತು. ಮೈಸೂರಿನ ಸೀನಿಯರ್ ಪೋಸ್ಟ್ ಮಾಸ್ಟರ್, ಮಂಗಳೂರಿನ ಹಿರಿಯ ಪೋಸ್ಟ್ ಮಾಸ್ಟರ್ಗೆ ಬರೆದ ಅಂಚೆ ಲಕೋಟೆಯನ್ನು, ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ, ಚೀಫ್ ಏರ್ಪೋರ್ಟ್ ಆಫೀಸರ್ ಅಶೋಥೋಸ್ ಚಂದ್ರ, ಏರ್ ಅಲಯನ್ಸ್ ಸಿಇಒ ಹರ್ಪ್ರೀತ್ ಸಿಂಗ್, ಏರ್ ಇಂಡಿಯಾ ಲಿಮಿಟೆಡ್ನ ಸ್ಟೇಷನ್ ಮ್ಯಾನೇಜರ್ ಪ್ರದೀಪ್ ಮೆನನ್, ಸಹಾಯಕ ಅಂಚೆ ಅಧೀಕ್ಷಕ ಶ್ರೀನಾಥ್ ಎನ್.ಬಿ ಸಮ್ಮುಖದಲ್ಲಿ ಸ್ವೀಕರಿಸಲಾಯಿತು. ಇದೇ ಸಂದರ್ಭದಲ್ಲಿ ಮಂಗಳೂರಿನಿಂದ ಮೈಸೂರಿಗೆ ತೆರಳಿದ ವಿಮಾನದಲ್ಲಿ ಮೈಸೂರಿನ ಸೀನಿಯರ್ ಪೋಸ್ಟ್ ಮಾಸ್ಟರ್ಗೆ ಬರೆದ ಪತ್ರವನ್ನು ರವಾನಿಸಲಾಯಿತು.