ಸುಬ್ರಹ್ಮಣ್ಯ: ನಾಗರ ಪಂಚಮಿ ದಿನದಂದು ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅಚ್ಚರಿಯೊಂದು ನಡೆದಿದ್ದು, ಜೀವಂತ ನಾಗವೊಂದು ದೇಗುಲದಲ್ಲಿ ಪ್ರತ್ಯಕ್ಷವಾಗಿದೆ.
ಪೂಜೆಯ ಮೊದಲು ಜೀವಂತ ನಾಗವೊಂದು ಪ್ರತ್ಯಕ್ಷವಾಗಿ ಕ್ಷೇತ್ರದ ಹೊರಾಂಗಣ, ಒಳಾಂಗಣ ಸುತ್ತಾಡಿದೆ. ಜೀವಂತ ನಾಗನಿಂದ ದೇವಸ್ಥಾನಕ್ಕೆ ಪ್ರದಕ್ಷಿಣೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ದೇಗುಲದಲ್ಲಿ ಮೂಲ ದೇವರಿಗೆ ಪಂಚಾಮೃತ ಅಭಿಷೇಕ ಬಳಿಕ ನಾಗ ಪ್ರತ್ಯಕ್ಷವಾಗಿದೆ ಎಂಬುದಾಗಿ ಮಾಹಿತಿ ಲಭ್ಯವಾಗಿದೆ. ಗರ್ಭಗುಡಿಯೊಳಗಿನ ಹುತ್ತದಿಂದ ಈ ನಾಗ ಹೊರ ಬಂದಿದೆ ಎನ್ನಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಪುರಾತನ ಕಾಲದಿಂದಲೂ ನಾಗದೋಷ ಪರಿಹಾರಕ್ಕೆ ಪ್ರಸಿದ್ಧಿ ಪಡೆದ ಕ್ಷೇತ್ರವಾಗಿದೆ. ಆದರೆ ಈ ವರ್ಷ ಕೊರೊನಾ ಹಿನ್ನೆಲೆಯಲ್ಲಿ ಇಂದು ಸರಳವಾಗಿ ನಾಗರ ಪಂಚಮಿ ಆಚರಣೆ ನಡೆಯುತ್ತಿತ್ತು ಮತ್ತು ಸಾರ್ವಜನಿಕರಿಗೂ ದೇಗುಲಕ್ಕೆ ಪ್ರವೇಶ ನಿರ್ಬಂಧಿಸಲಾಗಿತ್ತು. ದೇಗುಲದಲ್ಲಿ ನಡೆದ ಈ ಘಟನೆ ದೇಗುಲದಲ್ಲಿ ಉಪಸ್ಥಿತರಿದ್ದ ಆಡಳಿತ ಮಂಡಳಿಯ ಸಿಬ್ಬಂದಿಯಲ್ಲಿ ಅಚ್ಚರಿ ಮೂಡಿಸಿದೆ.