ಮಂಗಳೂರು: ಕರಾವಳಿಯ ಗಂಡು ಕಲೆ ಎಂದು ಪ್ರಸಿದ್ಧವಾದ ಯಕ್ಷಗಾನ ಸಾರ್ವಜನಿಕವಾಗಿ ಪ್ರದರ್ಶನ ಆಗುವುದು ಸಾಮಾನ್ಯ. ಆದರೆ, ಮಳೆಗಾಲದಲ್ಲಿ ಯಕ್ಷಗಾನದ ಸಾರ್ವಜನಿಕ ಪ್ರದರ್ಶನವಿರುವುದಿಲ್ಲ. ಈ ಸಂದರ್ಭದಲ್ಲಿ ಮನೆ ಮನೆಗಳಲ್ಲಿ ಯಕ್ಷಗಾನದ ಪ್ರದರ್ಶನ ನಡೆಯುತ್ತಿರುತ್ತದೆ.
ಕರಾವಳಿಯಲ್ಲಿ ಯಕ್ಷಗಾನ ಕಲೆಗೊಂದು ವಿಶೇಷ ಮಾನ್ಯತೆಯಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಯಕ್ಷಗಾನ ಪ್ರದರ್ಶನ ಸಾಮಾನ್ಯವಾಗಿ ನಡೆಯುತ್ತಲೇ ಇರುತ್ತದೆ. ಸಾರ್ವಜನಿಕ ಪ್ರದರ್ಶನವಾಗಿರುವ ಯಕ್ಷಗಾನ ನೋಡಲು ಸಾವಿರಾರು ಮಂದಿ ಆಸಕ್ತರು ಬರುತ್ತಾರೆ. ಆದ್ರೆ, ಈ ಯಕ್ಷಗಾನ ಪ್ರದರ್ಶನ ಸೇವೆಗೆ ಮಳೆಗಾಲದಲ್ಲಿ ವಿರಾಮವಿರುತ್ತದೆ.
ಇದನ್ನೂ ಓದಿ: 'ಹೆಜ್ಜೆ ಇಟ್ಟಿಹಳು ದ್ರೌಪದಿ ರಾಷ್ಟ್ರಪತಿಯ ಭವನದಲಿ..' ಪ್ರಥಮಪ್ರಜೆಗೆ ಯಕ್ಷಗಾಯನದ ಸ್ವಾಗತ
ಮಳೆಗಾಲದ ಸಂದರ್ಭದಲ್ಲಿ ಯಕ್ಷಗಾನ ಪ್ರದರ್ಶನ ಕಷ್ಟವಿರುವುದರಿಂದ ಯಕ್ಷಗಾನ ಮೇಳಗಳು ಈ ಸಂದರ್ಭದಲ್ಲಿ ಪ್ರದರ್ಶನ ನಡೆಸುವುದಿಲ್ಲ. ಆದ್ರೆ, ಕೆಲವೊಂದು ಕಲಾವಿದರಿಗೆ ಜೀವನ ನಡೆಸಲು ಹಣ ಅನಿವಾರ್ಯವಾಗಿರುವುದರಿಂದ ಮಳೆಗಾಲದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಹೌದು, ಕೆಲವು ಯಕ್ಷಗಾನ ಕಲಾವಿದರು ಒಟ್ಟು ಸೇರಿ ಮಳೆಗಾಲದ ಸಂದರ್ಭದಲ್ಲಿ ಚಿಕ್ಕ ಮೇಳವೆಂಬ ವಿಶೇಷ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಈ ಚಿಕ್ಕಮೇಳದಲ್ಲಿ ಇಬ್ಬರು ವೇಷಧಾರಿ ಕಲಾವಿದರು, ಭಾಗವತರು ಸೇರಿದಂತೆ ನಾಲ್ಕೈದು ಮಂದಿ ಇರುತ್ತಾರೆ. ಇವರು ಮನೆ ಮನೆಗೆ ಬಂದು ಯಕ್ಷಗಾನ ಸೇವೆ ನೀಡುತ್ತಾರೆ.
ಇದನ್ನೂ ಓದಿ: ಇಂಗ್ಲಿಷ್ ಯಕ್ಷಗಾನದಲ್ಲಿ ವಿಶೇಷ ಪ್ರಯೋಗ.. ಒಂದೇ ವೇದಿಕೆಯಲ್ಲಿ ಐದು ಪ್ರಸಂಗ, ಹೊಸಬರ ರಂಗಪ್ರವೇಶ
ಹೀಗೆ ಮನೆ ಮನೆಗೆ ಬಂದು ಚಿಕ್ಕ ಮೇಳ ಯಕ್ಷಗಾನ ಮಾಡುವ ತಂಡ ಒಂದೆರಡು ದಿನ ಮುಂಚಿತವಾಗಿ ಆಯಾ ಊರಿಗೆ ಬಂದು ಮನೆಯವರಿಗೆ ಮಾಹಿತಿ ನೀಡುತ್ತಾರೆ. ಮನೆಗೆ ಯಕ್ಷಗಾನ ಪ್ರದರ್ಶನಕ್ಕೆ ಬರುವ ಸಂದರ್ಭದಲ್ಲಿ ಆಯಾ ಮನೆಯವರು ಒಂದು ಕಿಲೋ ಅಕ್ಕಿ, ಹೂ, ವೀಳ್ಯದೆಲೆ, ಅಡಿಕೆ ಜೊತೆಗೆ ದಕ್ಷಿಣೆಯನ್ನು ನೀಡಬೇಕಾಗುತ್ತದೆ. ಮನೆ ಮನೆಗೆ ಹೋಗಿ ಪ್ರದರ್ಶನ ನೀಡುವ ತಂಡ ಸಂಜೆ 7 ರಿಂದ ರಾತ್ರಿ 11 ಗಂಟೆಯ ಒಳಗೆ ಪ್ರದರ್ಶನ ನೀಡುತ್ತಾರೆ. ಸುಮಾರು 30 ರಿಂದ 35 ಮನೆಗಳಿಗೆ ತೆರಳಿ ಯಕ್ಷಗಾನ ಪ್ರದರ್ಶನ ಮಾಡುತ್ತಾರೆ.
ಇದನ್ನೂ ಓದಿ: ಯಕ್ಷಗಾನ ರಂಗಸ್ಥಳಕ್ಕೂ ಬಂತು 'ಪುಷ್ಪಾ' ಸಿನಿಮಾದ 'ಶ್ರೀವಲ್ಲಿ' ಹಾಡು! ವಿಡಿಯೋ ವೈರಲ್