ಸುಳ್ಯ/ದಕ್ಷಿಣ ಕನ್ನಡ: ಹಿರಿಯ ಪತ್ರಕರ್ತ ರವಿರಾಜ್ ವಳಲಂಬೆ ಹೃದಯಾಘಾತದಿಂದ ಉಡುಪಿಯ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ.
ರವಿರಾಜ್ ವಳಲಂಬೆಯವರು ಉಡುಪಿಯ ಕಿನ್ನಿಮುಲ್ಕಿಯಲ್ಲಿರುವ ನಿವಾಸದಲ್ಲಿದ್ದಾಗಲೇ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿದ ಹಿನ್ನೆಲೆಯಲ್ಲಿ ಕೂಡಲೇ ಅವರನ್ನು ಆದರ್ಶ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ದಾರಿ ಮಧ್ಯೆ ಅವರು ಇಹಲೋಕ ತ್ಯಜಿಸಿದರು. ಮೃತ ರವಿರಾಜ್ ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಉಡುಪಿಯಲ್ಲಿ ಹಿಂದೆ ಈಟಿವಿ ವರದಿಗಾರನಾಗಿ ಹಲವು ವರುಷಗಳ ಕಾಲ ಸೇವೆ ಸಲ್ಲಿಸಿದ ರವಿರಾಜ್, ನಂತರ ಸುವರ್ಣ ವಾಹಿನಿಯಲ್ಲಿ ಪೊಲಿಟಿಕಲ್ ವರದಿಗಾರನಾಗಿ ಕೆಲಸ ಮಾಡಿದ್ದರು. ಬಳಿಕ ಉಡುಪಿಯಲ್ಲಿ ಪ್ರೈಮ್ ಟಿವಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು.
ರವಿರಾಜ್ ವಳಲಂಬೆಯವರ ಪಾರ್ಥಿವ ಶರೀರವನ್ನು ಸುಳ್ಯದ ಶಾಂತಿನಗರದಲ್ಲಿರುವ ಅವರ ಹಿರಿಯ ಸಹೋದರ ಉಮೇಶ್ ವಳಲಂಬೆಯವರ ಮನೆಗೆ ತರಲಾಗಿದೆ. ಸುಳ್ಯದಲ್ಲಿ ಇಂದು ಅಂತ್ಯಕ್ರಿಯೆ ನಡೆಯಲಿದೆ.