ಕಡಬ: ತಾಲೂಕಿನ ಕಾಯರಡ್ಕ-ಪೇರಡ್ಕ ರಸ್ತೆಯ ಕಾಮಗಾರಿ ಕೆಲಸ ಆರಂಭವಾದದ್ದು ನೋಡಿದರೆ ಇನ್ನೇನು ಗರಿಷ್ಠ ಒಂದು ವಾರದಲ್ಲಿ ಕೆಲಸ ಪೂರ್ಣವಾಗುವ ರೀತಿಯಲ್ಲಿ ಸಾಗುತ್ತಿತ್ತು. ಆದ್ರೆ ಅರ್ಧದಲ್ಲೇ ಕೆಲಸ ನಿಲ್ಲಿಸಿ ಈ ಭಾಗದ ಜನರನ್ನು ಸಂಕಷ್ಟಕ್ಕೀಡು ಮಾಡಿ ಲೋಕೋಪಯೋಗಿ ಇಲಾಖೆ ಪರಾರಿಯಾಯಿತೇ ಎಂಬ ಸಂಶಯ ಇಲ್ಲಿನ ಸಾರ್ವಜನಿಕರಲ್ಲಿ ಮೂಡಿದೆ.
ಕಡಬದಿಂದ ನೂಜಿಬಾಳ್ತಿಲ ಮತ್ತು ಸುಬ್ರಹ್ಮಣ್ಯ- ಧರ್ಮಸ್ಥಳ ರಾಜ್ಯ ಹೆದ್ದಾರಿಗೆ ಸಂಪರ್ಕಿಸುವ ಒಂದು ಪ್ರಮುಖ ರಸ್ತೆಯಾಗಿದೆ. ತೀರಾ ಹದಗೆಟ್ಟ ಈ ಕಾಯರಡ್ಕ-ಪೇರಡ್ಕ ರಸ್ತೆಯ ಬಹುಕಾಲದ ಬೇಡಿಕೆಯ ನಂತರ ಆರಂಭಿಸಿದ್ದ ಕಾಮಗಾರಿಯನ್ನು ಸುಳ್ಯ ಶಾಸಕರಾದ ಎಸ್. ಅಂಗಾರ ಅವರು ಅ. 21ರಂದು ಪರಿಶೀಲನೆ ನಡೆಸಿದ್ದರು. ಮಾತ್ರವಲ್ಲದೆ ಸ್ಥಳೀಯ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮುಖಂಡರೂ ಬಂದು ಪರಿಶೀಲನೆ ಮಾಡಿದ್ದರು. ಇದಾಗಿ ಮೂರು ತಿಂಗಳು ಆದರೂ ಕೆಲಸವನ್ನು ಮಾತ್ರ ಪೂರ್ತಿ ಮಾಡಿ ಮುಗಿಸಲು ಇಲಾಖೆ ಮುಂದಾಗುತ್ತಿಲ್ಲ.
ಈ ರಸ್ತೆಯು ಲೋಕೋಪಯೋಗಿ ಇಲಾಖೆಯ ರೂ.50 ಲಕ್ಷ ವಿಶೇಷ ಅನುದಾನದಲ್ಲಿ ದುರಸ್ತಿ ಕಾರ್ಯ ಆರಂಭಿಸಲಾಗಿತ್ತು. ಕಾಮಗಾರಿ ಆರಂಭದಲ್ಲಿ ಪ್ರಗತಿಯಲ್ಲಿತ್ತು. ಜನರೂ ಅತ್ಯಂತ ಸಂತೋಷ ಪಟ್ಟಿದ್ದರು. ಸುಳ್ಯ ಶಾಸಕ ಎಸ್. ಅಂಗಾರ ಅವರೂ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿ, ಉತ್ತಮ ರೀತಿಯಲ್ಲಿ ಶೀಘ್ರ ಕಾಮಗಾರಿ ಮುಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅಂದೇ ಸೂಚನೆ ನೀಡಿದ್ದರು. ಅಂದು ಸ್ಥಳದಲ್ಲಿದ್ದ ಪುತ್ತೂರು ಲೋಕೋಪಯೋಗಿ ಇಲಾಖಾ ಇಂಜಿನಿಯರ್ ಈ ಕಾಮಗಾರಿಯ ಮಾಹಿತಿಯನ್ನು ನೀಡಿದ್ದರು. ಆದರೆ ಇದೀಗ ಈ ಕಾಮಗಾರಿ ನಿಲ್ಲಿಸಿದ ಬಗ್ಗೆ ಲೋಕೋಪಯೋಗಿ ಇಲಾಖಾ ಅಧಿಕಾರಿಗಳನ್ನು ಕೇಳಿದ್ರೆ ಉಡಾಫೆ ಉತ್ತರ ಬಿಟ್ಟರೆ ಸ್ಪಷ್ಟವಾದ ಕಾರಣ ನೀಡುತ್ತಿಲ್ಲ.
ಈ ಬಗ್ಗೆ ಮೊದಲು ಕೇಳಿದ್ದಾಗ ಮೂರು ದಿನಗಳಲ್ಲಿ ಕೆಲಸ ಆರಂಭಿಸಲಾಗುವುದು ಎಂದ ಅಧಿಕಾರಿಗಳು ನಂತರ ಒಂದು ವಾರದಲ್ಲಿ ಆರಂಭಿಸಲಾಗುತ್ತದೆ ಎಂದಿದ್ದಾರೆ. ಆದರೆ ಇದೀಗ ಎರಡು ವಾರಗಳು ಕಳೆದರೂ ಕೆಲಸವನ್ನು ಆರಂಭಿಸುವ ಲಕ್ಷಣಗಳು ಕಾಣುತ್ತಿಲ್ಲ. ಈಗ ಅಧಿಕಾರಿಗಳು ಫೋನ್ ಕರೆಯನ್ನೂ ಸ್ವೀಕರಿಸುವ ಗೋಜಿಗೆ ಹೋಗುತ್ತಿಲ್ಲ.
ಒಟ್ಟಿನಲ್ಲಿ ಜಲ್ಲಿ, ಧೂಳಿನಿಂದ ಆವೃತವಾಗಿ ಸಂಚರಿಸಲು ಆಯೋಗ್ಯವಾಗಿ ಮಾಡಿದ ಈ ರಸ್ತೆಯ ಕಾಮಗಾರಿಯನ್ನು ಕೂಡಲೇ ಮಾಡಿ ಮುಗಿಸಿ ಸಂಚಾರಕ್ಕೆ ಯೋಗ್ಯವಾಗಿ ಮಾಡುವಲ್ಲಿ ಸಂಬಂಧಪಟ್ಟವರು ಗಮನ ಹರಿಸಬೇಕಿದೆ.