ಮಂಗಳೂರು: 2019ರಲ್ಲಿ ಮಗುವಿನ ಹುಡುಕಾಟದೊಂದಿಗೆ ಮಂಗಳೂರಿಗೆ ಬಂದಿದ್ದ ಮಧ್ಯಪ್ರದೇಶ ಮೂಲದ ಮಾನಸಿಕ ಅಸ್ವಸ್ಥ ಮಹಿಳೆಯನ್ನು ವೈಟ್ ಡೌಸ್ ಸಂಸ್ಥೆ ರಕ್ಷಿಸಿ ಆರೈಕೆ ಮಾಡಿದ್ದು, ಇದೀಗ ಮಹಿಳೆ ಸಂಪೂರ್ಣ ಗುಣಮುಖರಾಗಿದ್ದಾರೆ. ಆ ಮಹಿಳೆಯನ್ನು ಅವರ ಕುಟುಂಬದವರೊಂದಿಗೆ ಸೇರಿಸಲಾಗಿದೆ.
ಮಧ್ಯಪ್ರದೇಶದ ಶಾಜಾಪುರ್ನ ನಬೀಸಾ ಮಾನಸಿಕ ಅಸ್ವಸ್ಥರಾಗಿದ್ದ ಮಹಿಳೆ. 2019 ರ ಮೇ ತಿಂಗಳಲ್ಲಿ ಮಂಗಳೂರಿಗೆ ಬಂದಿದ್ದ ಇವರು ತಮ್ಮ ಕಳೆದು ಹೋಗಿರುವ ಮಗುವಿನ ಹುಡುಕಾಟಕ್ಕಾಗಿ ನಗರದ ಬೀದಿ ಬೀದಿಗಳಲ್ಲಿ ಅಲೆದಾಟ ನಡೆಸಿದ್ದರು. ಈ ಕುರಿತು ಮಾಹಿತಿ ಪಡೆದ ವೈಟ್ ಡೌಸ್ ಸಂಸ್ಥೆಯ (ನಿರ್ಗತಿಕರ ಆಶ್ರಯ ಕೇಂದ್ರ) ಸ್ಥಾಪಕಿ ಕೊರಿನ್ ರಸ್ಕಿನ್, ಮಾನಸಿಕ ಅಸ್ವಸ್ಥರಾಗಿದ್ದ ನಬೀಸಾ ಅವರನ್ನು ತಮ್ಮ ಸಂಸ್ಥೆಗೆ ಕರೆತಂದು ಆರೈಕೆ ಮಾಡಿದ್ದಾರೆ.
ಇದೀಗ ನಬೀಸಾ ಸಂಪೂರ್ಣ ಗುಣಮುಖರಾಗಿದ್ದು, ತಮ್ಮ ಊರಿನ ಬಗ್ಗೆ ರಸ್ಕಿನ್ ಅವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಅವರ ವಿಳಾಸವನ್ನು ಪತ್ತೆ ಹಚ್ಚಿದ ಸಂಸ್ಥೆ ಅವರ ಕುಟುಂಬದವರಿಗೆ ವಿಷಯವನ್ನು ತಿಳಿಸಿದ್ದಾರೆ. ಮಹಿಳೆಯ ತಂದೆ ಮಂಗಳೂರಿಗೆ ಬಂದು ಮಗಳನ್ನು ಕರೆದುಕೊಂಡು ಹೋಗಿದ್ದಾರೆ.
ಕಳೆದ 12 ವರ್ಷಗಳ ಹಿಂದೆ ನಬೀಸಾರ ಮಗುವನ್ನು ರೈಲು ನಿಲ್ದಾಣದಲ್ಲಿ ದುಷ್ಕರ್ಮಿಗಳು ಅಪಹರಿಸಿಕೊಂಡು ಹೋಗಿದ್ದರಂತೆ. ಅಂದಿನಿಂದ ತಮ್ಮ ಮಗುವಿನ ಹುಡುಕಾಟದಲ್ಲಿ ತೊಡಗಿದ್ದ ನಬೀಸಾ ಅವನನ್ನು ಹುಡುಕುತ್ತ ಮಂಗಳೂರಿಗೆ ಬಂದಿದ್ದರು ಎಂದು ಕೊರಿನ್ ರಸ್ಕಿನ್ ತಿಳಿಸಿದ್ದಾರೆ.
ಇದನ್ನೂ ಓದಿ: 3 ವರ್ಷದ ಹಿಂದೆ ಕಾಣೆಯಾದ ತಮ್ಮನ ಬರುವಿಕೆಯ ಹಾದಿ ನೋಡುತ್ತಿರುವ ಅಣ್ಣ