ಮಂಗಳೂರು: ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ದಿನದ 24 ಗಂಟೆಯೂ ನೀರು ಸರಬರಾಜು ಮಾಡುವ 792.42 ಕೋಟಿ ರೂ. ವೆಚ್ಚದ ಜಲಸಿರಿ ಯೋಜನೆಗೆ ನೀರಿನ ಲಭ್ಯತೆಯ ಕುರಿತು ಪಾಲಿಕೆಯ ಆಡಳಿತ ಹಾಗೂ ವಿಪಕ್ಷ ಸದಸ್ಯರ ಪ್ರಶ್ನೆಗಳಿಗೆ ಯೋಜನೆಯ ಗುತ್ತಿಗೆ ಸಂಸ್ಥೆಯಾದ ಸುಯೇಜ್ ಇಂಡಿಯಾದ ಪ್ರತಿನಿಧಿಗಳು ಉತ್ತರಿಸುವಲ್ಲಿ ವಿಫಲರಾದ ಘಟನೆ ನಿನ್ನೆ ನಡೆದಿದೆ.
ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ನಡೆದ ಜಲಸಿರಿ ಯೋಜನೆ ಕಾಮಗಾರಿಯ ಅನುಷ್ಠಾನದ ಕುರಿತ ಮಾಹಿತಿ ಕಾರ್ಯಾಗಾರದಲ್ಲಿ, 2046ನೇ ಇಸವಿಯವರೆಗೆ ನಗರ ವ್ಯಾಪ್ತಿಯಲ್ಲಿ ಇಡೀ ದಿನ ನೀರು ಪೂರೈಕೆಗೆ ಈಗಿರುವ ಜಲಮೂಲ ಸಾಕಾಗಲಿದೆಯೇ?, ಬೇರೆ ಜಲಮೂಲಗಳಿಗೆ ಯಾವ ವ್ಯವಸ್ಥೆ ಮಾಡಲಾಗಿದೆ ಎಂದು ಪಾಲಿಕೆಯ ಸದಸ್ಯರು ಪ್ರಶ್ನಿಸಿದ್ದಾರೆ. ಪ್ರಶ್ನೆಗಳಿಗೆ ಉತ್ತರಿಸುವಲ್ಲಿ ಸುಯೇಜ್ ಇಂಡಿಯಾದ ಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದ ಕೇವಲ ಚರ್ಚೆಯಲ್ಲಿಯೇ ಸಭೆ ಮುಕ್ತಾಯಗೊಂಡಿದೆ.
ಈ ಸುದ್ದಿಯನ್ನೂ ಓದಿ: ಅನಾರೋಗ್ಯದಿಂದ ಬಳಲುತ್ತಿದ್ದ ಒಂದು ಹಸು ತಂದು ಸಾಕಿದ ನಾಗಮ್ಮ ಈಗ 80 ಹಸುಗಳ "ಗೋಮಾತೆ"
ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ಮಾತನಾಡಿ, ತುಂಬೆ ಅಣೆಕಟ್ಟಿನ ಎತ್ತರವನ್ನು 7 ಮೀಟರ್ಗೆ ಎತ್ತರಿಸಿದಲ್ಲಿ 324 ಎಕರೆ ಭೂಮಿ ಮುಳುಗಡೆಯಾಗಲಿದೆ. ಇಷ್ಟು ದೊಡ್ಡ ಮಟ್ಟದ ಜಮೀನು ಸ್ವಾಧೀನ ಪಡಿಸುವಲ್ಲಿ ಸಾಕಷ್ಟು ತೊಂದರೆ ಎದುರಾಗುವ ಸಂಭವವಿದೆ. ಹಾಗಾಗಿ 6.5 ಮೀಟರ್ಗೆ ಏರಿಕೆ ಮಾಡಿ ಮುಳುಗಡೆಯಾಗುವ ಪ್ರದೇಶಗಳಿಗೆ ಬಾಡಿಗೆ ಆಧಾರದಲ್ಲಿ ಪರಿಹಾರ ನೀಡಬಹುದಾದ ಬಗ್ಗೆ ಜಿಲ್ಲಾಧಿಕಾರಿ ಚಿಂತನೆ ನಡೆಸಿದ್ದಾರೆ. ಈ ಬಗ್ಗೆ ಪ್ರಾಯೋಗಿಕ ಸಫಲತೆ ನೋಡಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.