ಕಡಬ (ದಕ್ಷಿಣ ಕನ್ನಡ): ರಬ್ಬರ್ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕನೋರ್ವ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿ ನೆಲ್ಯಾಡಿ ಗ್ರಾಮದ ಮಾದೇರಿ ನಿವಾಸಿ ಸುನಿಲ್ನನ್ನು ಕಡಬ ಪೊಲೀಸರು ಬಂಧಿಸಿದ್ದಾರೆ.
ಸಂತ್ರಸ್ತ ಬಾಲಕಿಯ ತಂದೆ ನೀಡಿದ ದೂರು ಆಧರಿಸಿ ಕಡಬ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ. ಬಾಲಕಿಯ ಮನೆಯ ಪಕ್ಕದಲ್ಲಿ ರಬ್ಬರ್ ತೋಟಕ್ಕೆ ಟ್ಯಾಪಿಂಗ್ ಕೆಲಸಕ್ಕೆ ಆರೋಪಿ ಬರುತ್ತಿದ್ದನಂತೆ. ಬಾಲಕಿಯ ಅಜ್ಜನ ಜೊತೆ ಮಾತನಾಡುವ ನೆಪದಲ್ಲಿ ಆಗಾಗ ಮನೆಗೆ ಬರುತ್ತಿದ್ದನಂತೆ.
ಆರೋಪಿಯು ಬಾಲಕಿಯ ಮನೆಗೆ ಬಂದು ಬಾಲಕಿಯ ಅಜ್ಜನಿಗೆ ಮದ್ಯಪಾನ ಮಾಡಿಸಿ ಬಾಲಕಿಯನ್ನು ಬಲವಂತವಾಗಿ ರೂಮಿಗೆ ಎಳೆದೊಯ್ದು ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಈ ವಿಚಾರವನ್ನು ಯಾರಲ್ಲಾದರೂ ಹೇಳಿದರೆ ಕೊಂದು ಹಾಕುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾನೆ. ಬಳಿಕ ಮನೆಯಲ್ಲಿ ಅಜ್ಜ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಮತ್ತೊಮ್ಮೆ ಮನೆಗೆ ಬಂದು ಬಲವಂತವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಪೋಕ್ಸೋ ಪ್ರಕರಣ ದಾಖಲಿಸಕೊಂಡ ಕಡಬ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
(ಓದಿ: ಗ್ಯಾಂಗ್ರೇಪ್ ಆರೋಪಿಗಳ ಮನೆಯನ್ನು ಜೆಸಿಬಿಯಿಂದ ಧ್ವಂಸಗೊಳಿಸಿದ ಜಿಲ್ಲಾಡಳಿತ)