ಬೆಳ್ತಂಗಡಿ: ತಾಲೂಕು ವ್ಯಾಪ್ತಿಯಲ್ಲಿ ನಡೆದ ಎರಡು ಮಾನಭಂಗ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಂಟ್ವಾಳ ಡಿವೈಎಸ್‌ಪಿ ವೆಲೆಂಟೈನ್ ಡಿಸೋಜಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿ, ಹೇಳಿಕೆಗಳನ್ನು ದಾಖಲಿಸಿದರು.
ಕಳೆಂಜ ಗ್ರಾಮದಲ್ಲಿ ನಡೆದ ಅಪ್ರಾಪ್ತೆಯ ಮೇಲೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ರೆಜಿಮೋನು ಮತ್ತು ಕೃಷ್ಣ ಎಂಬವವರು ಬಂಧಿಸಲ್ಪಟ್ಟಿದ್ದು, ಸ್ಥಳಕ್ಕೆ ಭೇಟಿ ನೀಡಿದ ಡಿವೈಎಸ್‌ಪಿ ಮಹಜರು ನಡೆಸಿದರು. ಬಳಿಕ ಬೆಳಾಲು ಗ್ರಾಮದ ಸುರುಳಿಗೆ ತೆರಳಿದರು. ಇಲ್ಲಿನ ಪ್ರಕರಣದಲ್ಲಿ ದಲಿತ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬೀಡಿ ಬ್ರ್ಯಾಂಚ್ ಮಾಲೀಕ ಸಲೀಂ ಎಂಬುವವರ ವಿರುದ್ಧ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖಾಧಿಕಾರಿಯೂ ಆಗಿರುವ ಡಿವೈಎಸ್‌ಪಿ ಅವರು ಸ್ಥಳ ಮಹಜರು ನಡೆಸಿ ಸಂತ್ರಸ್ತೆ ಮತ್ತು ಅವರ ಮನೆಯವರ ಹೇಳಿಕೆ ದಾಖಲಿಸಿಕೊಂಡರು.
ನಾಲ್ಕು ಮಂದಿಯ ವಿರುದ್ಧ ಪ್ರಕರಣ: ಘಟನೆಯ ದಿನ ಸಲೀಂ ಜೊತೆಗಿದ್ದ ಸಹೋದರ ಮುಹಮ್ಮದ್ ಶರೀಫ್ ಅವರು ಧರ್ಮಸ್ಥಳ ಠಾಣೆಗೆ ಪ್ರತಿದೂರು ನೀಡಿದ್ದು, ನಾವು ಸಹೋದರರಿಬ್ಬರು ಬೀಡಿ ತೆಗೆಯಲು ಹೋಗಿದ್ದ ವೇಳೆ 8 ಮಂದಿಯ ತಂಡ ಸಲೀಂಗೆ ಅವಾಚ್ಯ ಶಬ್ಧಗಳಿಂದ ಬೈಯ್ದು, ಹಲ್ಲೆ ನಡೆಸಿದ್ದಾರೆ ಎಂದು ಆಪಾದಿಸಿದ್ದಾರೆ. ಈ ಹಿನ್ನೆಲೆ ಬೆಳಾಲು ಗ್ರಾಮದ ರಮೇಶ್ ಮನ್ನಾಜೆ, ವಸಂತ, ಪ್ರಸಾದ, ರಮಿತ್ ಎಂಬವವರು ಹಾಗೂ ಇತರರು ಹಲ್ಲೆ ನಡೆಸಿದ್ದಾರೆ ಎಂದು ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಡಿವೈಎಸ್‌ಪಿ ವೆಲೆಂಟೈನ್ ಡಿಸೋಜಾ, ಪ್ರಕರಣದ ತನಿಖೆ ಮುಂದುವರೆದಿದ್ದು, ಹೇಳಿಕೆ ಮತ್ತು ಸ್ಥಳ ಮಹಜರು ಪ್ರಕ್ರಿಯೆ ಇಂದು ನಡೆದಿದೆ. ಕಳೆಂಜ ಮತ್ತು ಬೆಳಾಲು ಎರಡೂ ಪ್ರಕರಣಗಳಲ್ಲಿ ಸಂತ್ರಸ್ತರ ಹೇಳಿಕೆ ಪಡೆಯಲಾಗಿದೆ. ಬೆಳಾಲು ಪ್ರಕರಣದಲ್ಲಿ ಕೆಲವರು ಆರೋಪಿ ಪರವಾಗಿ ಹೇಳಿಕೆ ನೀಡಿದ್ದು, ಅದನ್ನು ತನಿಖೆಯ ಭಾಗವಾಗಿ ದಾಖಲಿಸಿಕೊಳ್ಳಲಾಗಿದೆ. ಒಟ್ಟಾರೆ ಸಮಗ್ರ ತನಿಖೆ ಮುಂದುವರಿಯಲಿದೆ ಎಂದು ತಿಳಿಸಿದರು.