ಪುತ್ತೂರು : ವಾರಂತ್ಯದ ಕರ್ಫ್ಯೂ ಮಾರ್ಗಸೂಚಿ ಪಾಲಿಸಿ ಪ್ರತಿಭಟನೆ ನಿರ್ಧಾರ ಕೈ ಬಿಡುವಂತೆ ವರ್ತಕರೊಂದಿಗೆ ಪುತ್ತೂರು ತಹಶೀಲ್ದಾರರು ಮನವಿ ಮಾಡಿದರು. ಇದಕ್ಕೆ ನಿರ್ಧಾರವನ್ನು ಕೈ ಬಿಡುವುದಾಗಿ ವರ್ತಕ ಸಂಘ ಒಪ್ಪಿಗೆ ಸೂಚಿಸಿದೆ.
ಕೊರೊನಾ ಹಿನ್ನೆಲೆ ಜಾರಿಯಲ್ಲಿರುವ ವೀಕೆಂಡ್ ಕರ್ಫ್ಯೂ ತೆರವು ಮಾಡಬೇಕು. ಇಲ್ಲವಾದರೆ ನಾವು ಅಂಗಡಿ ತೆರೆದು ವ್ಯವಹಾರ ನಡೆಸುತ್ತೇವೆ ಎಂದು ವರ್ತಕರು ನಿರ್ಧರಿಸಿದ್ದರು. ಈ ಕುರಿತಂತೆ ಇಂದು ನಗರಸಭೆ ಪೌರಾಯುಕ್ತರು ನಗರಸಭೆ ಸಭಾಂಗಣದಲ್ಲಿ ತಹಶೀಲ್ದಾರ್ ತುರ್ತು ಸಭೆ ನಡೆಸಿದರು. ಈ ವೇಳೆ ಕರ್ಫ್ಯೂಗೆ ಸಹಕಾರ ನೀಡುವುದಾಗಿ ವರ್ತಕರು ತಿಳಿಸಿದರು.
ಸಭೆಯಲ್ಲಿ ತಹಶೀಲ್ದಾರ್ ರಮೇಶ್ ಬಾಬು ಮಾತನಾಡಿ, ದಕ್ಷಿಣ ಕನ್ನಡ, ಕೊಡಗು, ಉಡುಪಿ, ಉತ್ತರ ಕನ್ನಡದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಏರಿದೆ. ಬೇರೆ ಜಿಲ್ಲೆಯಲ್ಲಿರುವ ಕೋವಿಡ್ ಪಾಸಿಟಿವಿಟಿಗಿಂತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಾಸಿಟಿವಿಟಿ ಶೇ.2.8 ಇದೆ. ಈ ನಾಲ್ಕು ಜಿಲ್ಲೆಗಳನ್ನು ಬಿಟ್ಟು ಉಳಿದ 27 ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂವನ್ನು ಲಿಫ್ಟ್ ಮಾಡಿದ್ದೇವೆ.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ಸಂಬಂಧಿಸಿದ ವೀಕೆಂಡ್ ಕರ್ಫ್ಯೂ ತೆರವು ಮಾಡಲು ಸೋಮವಾರ ದಿನ ಮುಖ್ಯಮಂತ್ರಿಗಳ ಜೊತೆ ಶಾಸಕರು, ಸಚಿವರು ಮಾತುಕತೆ ನಡೆಸಲಿದ್ದಾರೆ. ಮುಂದಿನ ವಾರ ವೀಕೆಂಡ್ ಖಂಡಿತವಾಗಿಯೂ ತೆರವಾಗಲಿದೆ ಎಂಬ ಭರವಸೆ ನೀಡಿದರು.
ಬಳಿಕ ಪೌರಾಯುಕ್ತ ಮಧು ಎಸ್ ಮನೋಹರ್ ಮಾತನಾಡಿ, ಜಿಲ್ಲೆಯಲ್ಲಿ ಶೇ.8ರಷ್ಟು ಪಾಸಿಟಿವಿಟಿ ರೇಟ್ ಇದೆ. ನಗರ ವ್ಯಾಪ್ತಿಯಲ್ಲಿ ಕಡಿಮೆ ಇದ್ದರೂ ದಕ್ಷಿಣ ಕನ್ನಡದಲ್ಲಿ ಜಾಸ್ತಿ ಇದೆ. ಈ ನಡುವೆ ಹತ್ತಿರದ ಕೇರಳದಲ್ಲಿ ಶೇ.18 ಪಾಸಿಟಿವಿಟಿ ಇದೆ. ಗಡಿ ಭಾಗದಿಂದ ಕೇರಳದವರು ನಗರಪ್ರದೇಶಕ್ಕೆ ಬರುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನೆಲೆ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದೆ. ಇದನ್ನು ಪಾಲನೆ ಮಾಡುವುದು ಅವಶ್ಯಕ ಎಂದರು.
ನಂತರ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜೋನ್ ಕುಟ್ಹಿನೊ ಮಾತನಾಡಿ, ನಾವು ಅಂಗಡಿ ತೆರೆದು ವ್ಯವಹಾರ ನಡೆಸಿದರೆ ಕೋವಿಡ್ ಜಾಸ್ತಿ ಆಗುವುದಿಲ್ಲ. ಆದರೆ, ನಾಳೆ ವೀಕೆಂಡ್ ಕರ್ಫ್ಯೂ ಇರುತ್ತದೆ. ಆದರೆ, ಅದರ ನಿಯಮವನ್ನು ಕೇವಲ ಅಂಗಡಿಯವರ ಮೇಲೆ ಯಾಕೆ ಹಾಕುತ್ತೀರಿ. ಕರ್ಫ್ಯೂ ಎಂದರೆ ಯಾರು ಜನಸಂಚಾರ ಇರಬಾರದು.
ಇಲ್ಲಿ ನಾಳೆ ಜನ ಸಂಚಾರ ಎಂದಿಗಿಂತಲೂ ಜಾಸ್ತಿ ಇರುತ್ತದೆ. ಇದು ಸಮಂಜಸವಲ್ಲ. ನಿಮಗೆ ಸರಿಯಾಗಿ ಪಾಲನೆ ಮಾಡಲು ಆಗುತ್ತಿಲ್ಲ. ನಮಗೆ ಮಾತ್ರ ನಿಮ್ಮ ಮಾರ್ಗಸೂಚಿಗಳು. ನಾವು ಅಂಗಡಿ ತೆರೆದು ಗಲಾಟೆ ಮಾಡುವವರಲ್ಲ. ಎಲ್ಲಾ ಮುನ್ನೆಚ್ಚರಿಕಾ ಕ್ರಮ ಕೈಗೊಂಡೇ ಓಪನ್ ಮಾಡಲು ಹೊರಟಿರುವುದು. ಆದರೂ ಶಾಸಕರು ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಮುಂದಿನ ವಾರದಿಂದ ಖಂಡಿತವಾಗಿಯೂ ವೀಕೆಂಡ್ ಕರ್ಫ್ಯೂವನ್ನು ನಿಲ್ಲಿಸಲಾಗುವುದು ಎಂದು ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಕರ್ಫ್ಯೂಗೆ ಸಹಕಾರ ನೀಡಲಿದ್ದೇವೆ ಎಂದರು.
ಸಭೆಯಲ್ಲಿ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ, ವರ್ತಕ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಭಗವಾನ್, ಸ್ನೇಹ ಸಂಸ್ಥೆಯ ಸತೀಶ್ ಎಸ್, ಯಂ.ರಾಜೇಶ್ ಕಾಮತ್, ಉಮ್ಮರ್ ಪಾರೂಕ್, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪೂರ್ವಾಧ್ಯಕ್ಷ ಪದ್ಮನಾಭ ಶೆಟ್ಟಿ, ಮಧುಸೂಧನ್ ಶೆಣೈ, ಚಿದಾನಂದ ಶೆಟ್ಟಿ, ಮನಮೋಹನ್ ಶೆಟ್ಟಿ, ಸಂಜೀವ ಶೆಟ್ಟಿ ಸಂಸ್ಥೆಯ ಸೂರಜ್ ಎಮ್, ಸಂತೋಷ್ ಎಮ್, ಶಂಕರ್ ಭಟ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.