ಪುತ್ತೂರು: ವೆಲ್‌ನೆಸ್ ಹೆಲ್ಪ್ ಲೈನ್ ಸಹಯೋಗದೊಂದಿಗೆ ಪರ್ಲಡ್ಕ ಗೋಳಿಕಟ್ಟೆ ಮುಯ್ಯದ್ದೀನ್ ಜುಮಾ ಮಸೀದಿ ವಠಾರದಲ್ಲಿ ಆಯುಷ್ಮಾನ್ ಕಾರ್ಡ್ ನೋಂದಾವಣೆ ಮತ್ತು ವಿವಿಧ ಸವಲತ್ತುಗಳ ಮಾಹಿತಿ ಅಭಿಯಾನ ಕಾರ್ಯಕ್ರಮ ನಡೆಸಲಾಯಿತು.
ಲಾಭದ ಒಂದು ಭಾಗ ಸಮಾಜಕ್ಕೆ ಅರ್ಪಣೆ ಶ್ಲಾಘನೀಯ:
ಮಸೀದಿಯ ಖತೀಬ್ ಅಬ್ದುಲ್ ರಶೀದ್ ರೆಹಮಾನಿಯ ಅವರು ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಜಾಗತಿಕ ಮಟ್ಟದಲ್ಲಿ ಕೊರೊನಾ ವ್ಯಾಪಕವಾಗಿ ಹರಡಿದೆ. ಭಾರತದಲ್ಲಿ ಶನಿವಾರ ಒಂದೇ ದಿನ ಸುಮಾರು 80 ಸಾವಿರ ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಜಗತ್ತಿನಲ್ಲಿ 2.5 ಕೋಟಿ ಜನ ಕೊರೊನಾ ಸೋಂಕಿತರಾಗಿದ್ದಾರೆ. ಇದು ಅತ್ಯಂತ ಖೇದಕರ ಸಂಗತಿ, ಆದರೆ ಈ ರೋಗವನ್ನೇ ಬಂಡವಾಳ ಶಾಹಿಗಳು ದುರುಪಯೋಗ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಇಂತಹ ಸಂದರ್ಭದಲ್ಲಿ ರೋಗಿಗಳಿಗೆ ಅಗತ್ಯವಾಗಿ ಬೇಕಾದ ಮಾರ್ಗದರ್ಶನ ಮಾಡುವುದು ಮುಖ್ಯ. ಮತ್ತೊಬ್ಬರಿಗೆ ಸಹಾಯ ಮಾಡು ಎಂಬುದು ನಮ್ಮ ಧರ್ಮದಲ್ಲಿದೆ. ಇಂತಹ ಸಂದರ್ಭದಲ್ಲಿ ಲಾಭದ ಒಂದು ಭಾಗವನ್ನು ಸಮಾಜಕ್ಕೆ ಅರ್ಪಿಸುತ್ತಿರುವ ವೆಲ್‌ನೆಸ್ ಹೆಲ್ಪ್ ಲೈನ್ ಸಂಸ್ಥೆಯ ಸಮಾಜ ಸೇವೆ ಮಾದರಿಯಾಗಿದೆ. ಮುಂದಿನ ದಿನದಲ್ಲಿ ಸಾಮಾಜಿಕ ಕಾರ್ಯದ ಜೊತೆಗೆ ಶಿಕ್ಷಣಕ್ಕೂ ಹೆಚ್ಚಿನ ಆದ್ಯತೆ ನೀಡಿ ಅದಕ್ಕಾಗಿ ಒಂದು ಕಾರ್ಯಕ್ರಮ ನಡೆಸುವಂತೆ ತಿಳಿಸಿದರು.
ದವಾ ಕೇ ಸಾತ್ ದುವಾ ಬಿ ಜಾಯಿಯೆ:
ಇದಿನಬ್ಬ ಪೌಂಡೇಶನ್ ಮುಖ್ಯಸ್ಥ ಸಲೀಮ್ ಸಾಗರ್ ಅವರು ಮಾತನಾಡಿ, ದವಾಕೆ ಸಾತ್ ದುವಾ ಬಿ ಜಾಯಿಯೇ ಎಂಬಂತೆ ಇವತ್ತು ಕೋವಿಡ್ ಸೋಂಕಿಗೆ ಯಾರೂ ಭಯ ಪಡುವ ಅಗತ್ಯವಿಲ್ಲ. ಆದರೆ ಎಚ್ಚರಿಕೆ ಇದ್ದರೆ ಸಾಕು, ಔಷಧಿಯ ಜೊತೆಗೆ ಪ್ರಾರ್ಥನೆಯೂ ಬೇಕು ಎಂದು ಹೇಳಿದರು. ನಮ್ಮ ಆಹಾರದಲ್ಲಿ ಮಿತ ಇರಲಿ, ಆಗ ಯಾವ ಖಾಯಿಲೆಯೂ ನಮಗೆ ಕಾಡುವುದಿಲ್ಲ ಎಂದರು. ವೆಲ್‌ನೆಸ್ ಹೆಲ್ಪ್ ಲೈನ್ ಮುಖ್ಯಸ್ಥ ಝಕರೀಯ ಪರ್ವೇಸ್ ಅವರು ಸಂಸ್ಥೆಯ ಸೇವಾ ಕಾರ್ಯದ ಬಗ್ಗೆ ವಿವರಿಸಿದರು.