ಕಡಬ: ಸರ್ಕಾರಿ ಕಾಲೇಜಿನ ಬಾವಿಗೆ ಅಳವಡಿಸಿದ್ದ ಪಂಪ್ಸೆಟ್ ಕಳವಾಗಿದ್ದು, ಈ ಬಗ್ಗೆ ಕಾಲೇಜಿನ ಮುಖ್ಯಸ್ಥರು ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಾಲೇಜಿನಲ್ಲಿ ಸೊಮವಾರದಂದು ಟ್ಯಾಂಕ್ಗೆ ನೀರು ತುಂಬಿಸಲು ಪಂಪ್ಸೆಟ್ ಸ್ವಿಚ್ ಹಾಕಿದ್ದರು. ಆದರೆ ಪಂಪು ಚಾಲು ಆಗದಿರುವುದನ್ನು ಗಮನಿಸಿದ ಸಿಬ್ಬಂದಿ ಬಾವಿಯತ್ತ ತೆರಳಿ ನೋಡಿದಾಗ ಪಂಪ್ ಕಳವಾಗಿರುವುದು ಗಮನಕ್ಕೆ ಬಂದಿದೆ. ಕೊರೊನಾ ಹಿನ್ನೆಲೆಯಲ್ಲಿ ಇತ್ತೀಚೆಗೆ ಪಿಯುಸಿ ಆಂಗ್ಲ ಪರೀಕ್ಷೆ ಮತ್ತು ಎಸ್.ಎಸ್.ಎಲ್.ಸಿ ಪರೀಕ್ಷೆ ಸಂದರ್ಭದಲ್ಲಿ ಕುಡಿಯುವ ನೀರಿಗಾಗಿ ಸುಮಾರು 20 ಸಾವಿರ ವೆಚ್ಚದಲ್ಲಿ ಪಂಪ್ ಅಳವಡಿಸಲಾಗಿತ್ತು. ಕೊಳವೆ ಬಾವಿ ತೋಡಿದರೂ ನೀರು ಸಿಗದ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ಬಾವಿಯನ್ನು ಶುಚಿಗೊಳಿಸಿ ಪಂಪ್ ಜೋಡಿಸಲಾಗಿತ್ತು.
ಇದೀಗ ದುಷ್ಕರ್ಮಿಗಳು ಪಂಪ್ಸೆಟ್ ಕಳವು ಮಾಡಿದ್ದು, ಇದೀಗ ಶಾಲಾ ಮಕ್ಕಳಿಗೆ ಕುಡಿಯಲು ನೀರು ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಈ ಕಳ್ಳರನ್ನು ಪತ್ತೆ ಹಚ್ಚುವಂತೆ ಠಾಣೆಗೆ ದೂರು ನೀಡಲಾಗಿದೆ.