ಬಂಟ್ವಾಳ(ದಕ್ಷಿಣಕನ್ನಡ): ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಆರೋಗ್ಯ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದು, ಬಂಟ್ವಾಳ ತಾಲೂಕಿನ 120 ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ.
ಉದ್ಯೋಗದಲ್ಲಿ ಸಮಾನತೆ, ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಸುಧಾರಣೆ, ಸೇವಾ ಭದ್ರತೆ, ಸಮಾನ ವೇತನ, ಸಮಾನ ಸೇವಾ ನಿಯಮಗಳು, ಕೋವಿಡ್ ಪ್ಯಾಕೇಜ್ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಮನೆಯಲ್ಲೇ ಕುಳಿತು ಪ್ರತಿಭಟಿಸುತ್ತಿದ್ದಾರೆ. ಬುಧವಾರ ಕೆಲಸಕ್ಕೆ ಹಾಜರಾಗಿದ್ದ ನೌಕರರು, ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸಿದ್ದರು. ಇಂದು ಮನೆಯಲ್ಲಿಯೇ ಕುಳಿತು ಚಪ್ಪಾಳೆ ಬೇಡ, ಸೌಲಭ್ಯ ನೀಡಿ ಎಂದು ಪ್ರತಿಭಟಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಂಟ್ವಾಳ ತಾಲೂಕು ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಪುಷ್ಪಲತಾ, ಗುತ್ತಿಗೆ ಆಧಾರಿತ 16 ಗ್ರೂಪ್ ಡಿ ನೌಕರರು, 4 ಸ್ಟಾಫ್ ನರ್ಸ್ ಮತ್ತು 2 ಲ್ಯಾಬ್ ಟೆಕ್ನಿಶಿಯನ್ ಕೆಲಸಕ್ಕೆ ಬಾರದ ಕಾರಣ ಸ್ವಲ್ಪ ತೊಂದರೆ ಉಂಟಾಗಿತ್ತು. ಹೀಗಾಗಿ ತಾತ್ಕಾಲಿಕ ನೆಲೆಯಲ್ಲಿ ನಾಲ್ವರು ದಿನಗೂಲಿ ನೌಕರರು ಆಸ್ಪತ್ರೆಯ ಕೆಲಸ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಒಟ್ಟು 32 ಡಿ ಗ್ರೂಪ್ ಖಾಯಂ ನೌಕರರು ಇರಬೇಕಾಗಿದ್ದ ಆಸ್ಪತ್ರೆಯಲ್ಲಿ ಕೇವಲ 2 ಖಾಯಂ ನೌಕರರಿದ್ದು, 16 ಗುತ್ತಿಗೆ ಆಧರಿತ ನೌಕರರಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.