ಮಂಗಳೂರು: ಬ್ಯಾಂಕ್ ಸಾಲ ಮಾಡಿ ಹಲವು ಕುಟುಂಬಗಳಿಗೆ ಬದುಕು ಕಟ್ಟಿಕೊಟ್ಟ ಸಂಜೀವಿನಿ ಫುಡ್ಸ್ ಬೇಕರಿಯನ್ನು ಮುಚ್ಚಿಸಿದ ಮಳವೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಅಮಾನತು ಮಾಡಲು ಒತ್ತಾಯಿಸಿ ಮಳವೂರು ಗ್ರಾಪಂ ಎದುರು ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತೆ ಪ್ರಸನ್ನಾ ರವಿ, ಮಾಲಿನ್ಯವಾಗುತ್ತಿದೆ ಎಂದು ಮಹಿಳೆಯೊಬ್ಬರು ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ಸಲ್ಲಿಸಿದ್ದು, ಇದನ್ನು ಸ್ಥಳೀಯ ಪಂಚಾಯತ್ಗೆ ಪರಿಶೀಲನೆ, ಹಿಂಬರಹಕ್ಕಾಗಿ ಅಧಿಕಾರಿಗಳು ಕಳಿಸಿಕೊಟ್ಟಿದ್ದರು. ಆದರೆ ಇಲ್ಲಿನ ಪಿಡಿಒ ವೆಂಕಟರಾಮನ್ ಪ್ರಕಾಶ್ ಇದನ್ನು ಪಂಚಾಯತ್ ಸಭೆಯಲ್ಲಿ ಮಂಡಿಸದೆ, ಕನಿಷ್ಠ ಸ್ಥಳ ಪರೀಶೀಲನೆ ನಡೆಸದೆ, ಮಾಲಿನ್ಯದ ಕುಂಟು ನೆಪ ನೀಡಿ ಸಂಜೀವಿನಿ ಫುಡ್ಸ್ ಬೇಕರಿಯನ್ನು ಮುಚ್ಚಿಸಿದ್ದಾರೆ. ಇದರಿಂದ ಹಲವಾರು ಕುಟುಂಬಗಳು ಬೀದಿಗೆ ಬಿದ್ದಿವೆ ಎಂದು ಆರೋಪಿಸಿದರು.
ಪಂಚಾಯತ್ ಸದಸ್ಯ ನಝೀರ್ ಎಂಬುವರು ನಡೆಸುವ ಅಕ್ರಮ ಮರಳು ಸಾಗಾಟಕ್ಕೆ ಸಂಜೀವಿನಿ ಫುಡ್ಸ್ ಬೇಕರಿಯ ಮಾಲಕಿ ವಾಣಿಯವರು ಆಕ್ಷೇಪ ಎತ್ತಿದ್ದೇ ಬೇಕರಿ ವಿರುದ್ಧ ಕ್ರಮಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.