ಮಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿಯನ್ನು ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಮುಂದಿರಿಸಿ, ವಿವಿಧ ಸಂಘಟನೆಗಳಿಂದ ಜಂಟಿಯಾಗಿ ನಗರದ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕೋವಿಡ್-19 ಸೋಂಕು ಸಮರ್ಥ ನಿಯಂತ್ರಣ, ಎಪಿಎಂಸಿ, ಭೂಸುಧಾರಣೆ, ವಿದ್ಯುತ್ ಕಾಯ್ದೆಗಳು ಹಾಗೂ ನೂತನ ಶಿಕ್ಷಣ ನೀತಿ ವಾಪಸಾತಿ, ಕಾರ್ಮಿಕ ಕಾನೂನುಗಳ ತಿದ್ದುಪಡಿಗಳ ವಿರುದ್ಧ ಎಐಟಿಯುಸಿ, ಸಿಐಟಿಯು, ಇಂಟಕ್, ಎಚ್ಎಂಎಸ್, ಎಐಕೆಎಸ್, ಎಸ್ಎಫ್ಐ, ಡಿವೈಎಫ್ ವೈ, ಜೆಎಂಎಸ್, ಡಿಎಚ್ಎಸ್ ಸಂಘಟನೆಗಳು ಜಂಟಿಯಾಗಿ ಪ್ರತಿಭಟನೆ ನಡೆಸಿದವು.
ಪ್ರತಿಭಟನೆಯನ್ನು ಉದ್ದೇಶಿಸಿ ವಾಸುದೇವ ಉಚ್ಚಿಲ ಮಾತನಾಡಿ, ಕೇಂದ್ರ ಸರ್ಕಾರ ಆತ್ಮನಿರ್ಭರತೆ ಎಂದು ಬೀಗುತ್ತಿದೆ. ಎಲ್ಲಾ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿದರೆ ಅದು ಆತ್ಮನಿರ್ಭರತೆ ಆಗುತ್ತದೆಯೇ ಎಂದು ಪ್ರಶ್ನಿಸಿದ ಅವರು, ಸ್ವಾವಲಂಬಿಯಾಗಿರುವ ನಮ್ಮ ದೇಶವನ್ನು ಪರಾವಲಂಬಿಯಾಗಿ ಮಾಡಲು ಸರ್ಕಾರ ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಹಾಗೂ ದೇಶದಲ್ಲಿ ಯಾರಿಗೂ ಉದ್ಯೋಗವಿಲ್ಲ, ಗ್ರಾಮೀಣ ಉದ್ಯೋಗ ಖಾತ್ರಿಯನ್ನು ಜಾರಿಗೆ ತನ್ನಿ ಎಂದು ರೈತರು ಹೇಳುತ್ತಿದ್ದಾರೆ. ಕೇಂದ್ರ ಸರ್ಕಾರದ ನೀತಿಯನ್ನು ರಾಜ್ಯ ಸರ್ಕಾರ ಪೋಷಿಸುತ್ತಿದ್ದು, ರೈತ ವಿರೋಧಿ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿಯನ್ನು ಜಾರಿಗೆ ತಂದಿದೆ. ಎಪಿಎಂಸಿ ಕಾಯ್ದೆ ತಿದ್ದುಪಡಿ, ವಿದ್ಯುಚ್ಛಕ್ತಿ ಕಾಯ್ದೆ ತಿದ್ದುಪಡಿಯನ್ನು ಜಾರಿಗೆ ತಂದು ರೈತರು, ಜನಸಾಮಾನ್ಯರನ್ನು ಬೀದಿಗೆ ತಂದು ನಿಲ್ಲಿಸಲು ಹವಣಿಸುತ್ತಿದೆ. ಕೂಡಲೇ ಇಂತಹ ಜನವಿರೋಧಿ ಕಾನೂನುಗಳನ್ನು ಸರ್ಕಾರ ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಸುನೀಲ ಕುಮಾರ್ ಬಜಾಲ್, ಮುನೀರ್ ಕಾಟಿಪಳ್ಳ, ಬಾಲಕೃಷ್ಣ, ಸೀತಾರಾಮ ಬೆರಿಂಜೆ, ಎಚ್ ವಿ ರಾವ್, ಕರುಣಾಕರ ಸರಿಪಳ್ಳ, ವಿಲ್ಸನ್ ಡಿಸೋಜ, ಜಯಂತಿ ಬಿ ಶೆಟ್ಟಿ, ದಯಾನಂದ ಶೆಟ್ಟಿ, ಮಾಧುರಿ ಬೋಳಾರ್ ಮತ್ತಿತರರು ಉಪಸ್ಥಿತರಿದ್ದರು.