ಮಂಗಳೂರು: ಡೆಂಗ್ಯೂ ಜ್ವರ ನಿಯಂತ್ರಿಸುವ ಮೊದಲು ಸೊಳ್ಳೆಗಳ ಲಾರ್ವಾ ನಾಶಪಡಿಸಬೇಕಾಗಿದ್ದು, ಹೀಗಾಗಿ ನಗರದಲ್ಲಿ ಜು.28ರಂದು 'ಡ್ರೈ ಡೇ ಆಚರಣೆ' ಮಾಡಬೇಕು ಎಂದು ದ.ಕ.ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಮನವಿ ಮಾಡಿದರು.
ನಗರದ ಪ್ರೆಸ್ ಕ್ಲಬ್ನಲ್ಲಿ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಎಲ್ಲಾ ನಾಗರಿಕರು ತಮ್ಮ ಮನೆ, ಸುತ್ತಮುತ್ತಲಿನ ಪರಿಸರ ಹಾಗೂ ತೆರೆದ ಪ್ರದೇಶಗಳಾದ ಟೆರೆಸ್, ಹೂಗಳ ಕುಂಡ, ಸೀಯಾಳದ ಸಿಪ್ಪೆಗಳಲ್ಲಿ ನಿಂತಿರುವ ನೀರನ್ನು ಸ್ವಚ್ಚಗೊಳಿಸಬೇಕು. ಅಲ್ಲದೆ ಸ್ವಚ್ಚ ವಾದ ನೀರಿನಲ್ಲಿ ಸೊಳ್ಳೆಗಳ ಲಾರ್ವಾ ಅಥವಾ ಮೊಟ್ಟೆಗಳನ್ನು ನಾಶಪಡಿಸಬೇಕು. ಈ ಮೂಲಕ ನಗರದಲ್ಲಿ ಸೊಳ್ಳೆಗಳ ಸಂತತಿಯನ್ನು ನಾಶ ಮಾಡದರೆ ಡೆಂಗ್ಯೂ ಕಾಯಿಲೆ ತಾನಾಗಿಯೇ ದೂರಗೊಳ್ಳುತ್ತದೆ ಎಂದು ಸಲಹೆ ನೀಡಿದರು.
ನಗರದಲ್ಲಿ ಡೆಂಗ್ಯು ಪ್ರಮಾಣ ಅಧಿಕವಾಗಿದ್ದು, ಈ ಹಿನ್ನೆಲೆಯಲ್ಲಿ ಮೊದಲಿಗೆ ಡೆಂಗ್ಯು ರೋಗವನ್ನು ತಡೆಗಟ್ಟಲು ಪ್ರಯತ್ನಿಸಿ, ಬಳಿಕ ಉಳಿದ ತಾಲ್ಲೂಕು ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ರೋಗ ತಡೆಗಟ್ಟಲು ಮುನ್ನೆಚ್ಚರಿಕೆ ವಹಿಸಲಾಗುವುದು. ಡೆಂಗ್ಯು ರೋಗದ ಉಪಶಮನಕ್ಕೆ ಫಾಗಿಂಗ್ ಪರಿಹಾರವಲ್ಲ. ಮೊದಲಾಗಿ ನಮ್ಮ ಸುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛ ನೀರು ನಿಲ್ಲದಂತೆ, ಸೊಳ್ಳೆಗಳ ಮೊಟ್ಟೆ ಗಳು ಅಥವಾ ಲಾರ್ವಾ ಹುಟ್ಟದಂತೆ ನೋಡಿಕೊಂಡರೆ ಡೆಂಗ್ಯು ತನ್ನಷ್ಟಕ್ಕೆ ಉಪಶಮನವಾಗುದು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈಗಾಗಲೇ ಕಾರ್ಯಾಚರಣೆ ಕೈಗೊಂಡಿದೆ ಎಂದು ಹೇಳಿದರು.
ಸೊಳ್ಳೆ ಉತ್ಪತ್ತಿಯನ್ನು ನಾಶ ಮಾಡುವುದರೊಂದಿಗೆ ಮುನ್ನೆಚ್ಚರಿಕೆ ದೃಷ್ಟಿಯಿಂದ ಸೊಳ್ಳೆ ಕಚ್ಚದಂತೆ ಮುಂಜಾಗ್ರತಾ ಕ್ರಮವಾಗಿ ಮೈ ಮುಚ್ಚುವ ಬಟ್ಟೆಗಳನ್ನು ಧರಿಸುವುದು, ಮೈ ಕಾಣುವಂತಹ ದೇಹದ ಭಾಗಗಳಿಗೆ ಬೇವಿನ ಎಣ್ಣೆ, ಒಡೊಮಸ್ ಮುಲಾಮು ಹಚ್ಚುವುದು ಮಾಡಬಹುದು. ಅಲ್ಲದೆ ಮನೆಯೊಳಗಿನ ಸೊಳ್ಳೆಗಳನ್ನು ನಾಶಪಡಿಸಲು ಸಾಂಬ್ರಾಣಿ ಹೊಗೆ, ಬೇವಿನ ಎಲೆಯ ಹೊಗೆ ಹಾಕುವುದು ಸೂಕ್ತ. ಮನೆಯ ಸುತ್ತಮುತ್ತ ನಿಂತ ನೀರಿನಲ್ಲಿ ತೇಲುವ ಹುಳುಗಳನ್ನು ಕಪ್ಪೆ ಮರಿ, ಮೀನಿನ ಮರಿಗಳೆಂದು ನಾವು ತಪ್ಪು ತಿಳಿದಿದ್ದೇವೆ. ಆದರೆ ಅವುಗಳು ಸೊಳ್ಳೆಗಳ ಲಾರ್ವಾ ಆಗಿದ್ದು, ಅವುಗಳ ನಾಶ ನಮ್ಮೆಲ್ಲರ ಗುರಿಯಾಗಿರಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.