ಮಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಟೆಸ್ಟ್ ಮತ್ತು ಚಿಕಿತ್ಸೆಗೆ ಸರ್ಕಾರ ಅನುಮತಿ ನೀಡಿದ ಬಳಿಕ, ಖಾಸಗಿ ಆಸ್ಪತ್ರೆಗಳು ಹಣ ಮಾಡುವ ದಂಧೆಯಲ್ಲಿ ತೊಡಗಿಕೊಂಡಿವೆ ಎಂದು ಎಸ್ಡಿಪಿಐ ರಾಜ್ಯ ಉಪಾಧ್ಯಕ್ಷ ಅಡ್ವೊಕೇಟ್ ಅಬ್ದುಲ್ ಮಜೀದ್ ಆರೋಪಿಸಿದ್ದಾರೆ
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಗಳು ಕೋವಿಡ್ ಪರೀಕ್ಷೆಗಾಗಿ 4,500 ರೂ. ಜೊತೆಗೆ ವೈದ್ಯರ ಪಿಪಿಇ ಕಿಟ್ ಚಾರ್ಜ್ ಎಂದು 8 ಸಾವಿರಕ್ಕೂ ಹೆಚ್ಚು ಹಣ ವಸೂಲಿ ಮಾಡುತ್ತಿದವೆ. ರೋಗಿಗಳಿಗೆ 15 ಸಾವಿರ ರೂ.ದಿಂದ 20 ಸಾವಿರ ರೂ. ವರೆಗೆ ದುಬಾರಿ ಬೆಲೆ ಹಾಕಿ, ಹಣ ಮಾಡುವ ದಂಧೆಯಲ್ಲಿ ತೊಡಗಿಸಿಕೊಂಡಿವೆ. ಖಾಸಗಿ ಆಸ್ಪತ್ರೆಗಳ ದಂಧೆ ಮತ್ತು ಲ್ಯಾಬ್ ಟೆಸ್ಟ್ ಕುರಿತು ಅನುಮಾನಗಳನ್ನು ಜನರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಕಾಲು ನೋವು, ಹೆರಿಗೆ ಅಥವಾ ಯಾವುದಾದರೂ ಸಣ್ಣ ಪುಟ್ಟ ಖಾಯಿಲೆಗಳಿಗೆ ಜನರು ಆಸ್ಪತ್ರೆಗೆ ತೆರಳಿದರೆ ಒತ್ತಾಯ ಪೂರ್ವಕವಾಗಿ ಕೊರೊನಾ ಟೆಸ್ಟ್ ಮಾಡಿಸಲಾಗುತ್ತಿದೆ ಎಂದು ಆರೋಪಿಸಿದರು.
ಕೊರೊನಾ ಪರೀಕ್ಷೆ ಮಾಡುವಂತೆ ಹೇಳಿ ತದನಂತರ ಕೋವಿಡ್ ಪರೀಕ್ಷೆಯ ವರದಿ ನೀಡದೆ ಪಾಸಿಟಿವ್ ಎಂದು ಹೇಳಲಾಗುತ್ತಿದೆ. ಪಾಸಿಟಿವ್ ಬಂದವರಿಗೆ, ನೆಗೆಟಿವ್ ಬಂದವರಿಗೆ ರಿಪೋರ್ಟ್ ಕೈ ಗೆ ನೀಡುತ್ತಿಲ್ಲ. ಬೆಳಗ್ಗೆ ನೆಗೆಟಿವ್ ಬಂದ ಪ್ರಕರಣಗಳಲ್ಲಿ ಮಧ್ಯಾಹ್ನ ಪಾಸಿಟಿವ್ ಎಂದು ಹೇಳಿ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆಗೆ ದಾಖಲಿಸಿಕೊಂಡು, ದುಬಾರಿ ಬಿಲ್ ನೀಡುತ್ತಿವೆ ಎಂದು ಅಬ್ದುಲ್ ಮಜೀದ್ ಆಕ್ರೋಶ ವ್ಯಕ್ತಪಡಿಸಿದರು.
ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುವ ಇಂತಹ ದಂಧೆಯ ಬಗ್ಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡು, ಸಾಮಾನ್ಯ ಜನರು ನೆಮ್ಮದಿಯಿಂದ ಬದುಕಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.