ಮಂಗಳೂರು: ಕ್ರೀಡೆಯಲ್ಲಿ ತೊಡಗಿಸಿಕೊಂಡು ದಾಖಲೆ ಸೃಷ್ಟಿಸುವುದು ಎಲ್ಲರಿಗೂ ಸಾಧ್ಯವಿಲ್ಲ. ತನ್ನದೇ ಸಾಮರ್ಥ್ಯದ ಇತರ ಸ್ಪರ್ಧಿಗಳನ್ನು ಹಿಂದಿಕ್ಕಿ ಸರ್ವಶ್ರೇಷ್ಠ ಸಾಧನೆ ಮಾಡುವುದೆಂದರೆ ಅದು ಅಷ್ಟು ಸುಲಭದ ಸಂಗತಿಯಲ್ಲ. ಮನಸ್ಸಿನಲ್ಲಿ ಗೆದ್ದೇ ಗೆಲ್ಲಬೇಕು ಎನ್ನುವ ಅಚಲ ವಿಶ್ವಾಸ ಬೇಕು. ಇದಕ್ಕೆ ಸಾಕ್ಷಿಯಾದವರು ಈ ಕಡಲತೀರದ ಕುವರ ಪ್ರದೀಪ್ ಕುಮಾರ್ ಆಚಾರ್ಯ.
![Mangaluru youth Pradeep Acharya achievement in power lifting](https://etvbharatimages.akamaized.net/etvbharat/prod-images/kn-mng-03-pradeep-photo-special-7202146_11082022164200_1108f_1660216320_496.jpg)
ನಗರದ ಉರ್ವಸ್ಟೋರ್ ನಿವಾಸಿ ಮುಕ್ಕ ರವೀಶ್ ಆಚಾರ್ಯ ಹಾಗೂ ಪ್ರೇಮ ದಂಪತಿಯ ದ್ವಿತೀಯ ಪುತ್ರ ಪ್ರದೀಪ್ ಕುಮಾರ ಆಚಾರ್ಯ, ಪವರ್ ಲಿಫ್ಟಿಂಗ್ ಕ್ರೀಡೆಯಲ್ಲಿ ದೇಶವೇ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾರೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಕಾಂ ಪದವಿ ಹಾಗೂ 2011ರಲ್ಲಿ ಮಂಗಳೂರು ಯುನಿವರ್ಸಿಟಿಯಲ್ಲಿ ಎಂಬಿಎ ಪದವಿ ಪಡೆದ ಇವರು ಪವರ್ ಲಿಫ್ಟಿಂಗ್ ಕ್ರೀಡೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಇವರು 2015 ರಿಂದ 83 ಕೆಜಿ ದೇಹ ತೂಕದಲ್ಲಿ ಸೀನಿಯರ್ ವಿಭಾಗದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
![Mangaluru youth Pradeep Acharya achievement in power lifting](https://etvbharatimages.akamaized.net/etvbharat/prod-images/kn-mng-03-pradeep-photo-special-7202146_11082022164200_1108f_1660216320_71.jpg)
ರಾಜ್ಯಮಟ್ಟದಲ್ಲಿ 18, ರಾಷ್ಟ್ರಮಟ್ಟದಲ್ಲಿ 21 ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ 12 ಪದಕಗಳನ್ನು ಗಳಿಸಿ ರಾಜ್ಯ ಹಾಗೂ ರಾಷ್ಟ್ರಕ್ಕೆ ಹೆಮ್ಮೆ ಎನಿಸಿಕೊಂಡಿದ್ದಾರೆ. 2017 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಕಾಮನ್‌ವೆಲ್ತ್ ಪವರ್ ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕ, 2018 ದುಬೈನಲ್ಲಿ ನಡೆದ ಏಷ್ಯನ್ ಬೆಂಚ್ ಪ್ರೆಸ್ನಲ್ಲಿ ಕಂಚಿನ ಪದಕ, 2019 ಮಾರ್ಚ್ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಏಷ್ಯನ್ ಓಕಾನಿಯ ಪವರ್ ಲಿಫ್ಟಿಂಗ್‌ನಲ್ಲಿ ಚಿನ್ನ, 2019 ಏಪ್ರಿಲ್‌ನಲ್ಲಿ ಹಾಂಕಾಂಗ್‌ನಲ್ಲಿ ನಡೆದ ಏಶ್ಯನ್ ಪವರ್ ಲಿಫ್ಟಿಂಗ್ ಚಾಂಪಿಯನ್ಷಿಪ್ನಲ್ಲಿ ಬೆಳ್ಳಿ ಪದಕ ಹಾಗೂ ಕೆನಡಾದಲ್ಲಿ ಕಾಮನ್‌ವೆಲ್ತ್ ಪವರ್ ಲಿಫ್ಟಿಂಗ್ ಹಾಗೂ ಬೆಂಚ್ ಪ್ರೆಸ್ ಚಾಂಪಿಯನ್‌ಷಿಪ್-2019 ಸ್ಪರ್ಧೆಯಲ್ಲಿ ಅವಳಿ ಚಿನ್ನದ ಪದಕದೊಂದಿಗೆ ಪಂದ್ಯಾಕೂಟದ 'ಬೆಸ್ಟ್ ಲಿಪ್ಟರ್' ಬಿರುದು ಸಹ ತನ್ನದಾಗಿಸಿಕೊಂಡಿದ್ದಾರೆ.
![Mangaluru youth Pradeep Acharya achievement in power lifting](https://etvbharatimages.akamaized.net/etvbharat/prod-images/kn-mng-03-pradeep-photo-special-7202146_11082022164200_1108f_1660216320_217.jpg)
ಹಿರಿಯ ರಾಷ್ಟ್ರೀಯ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್-2021 ಕೊಯಮತ್ತೂರು ಇಲ್ಲಿ ಚಿನ್ನದ ಪದಕ, ಹಿರಿಯ ರಾಷ್ಟ್ರೀಯ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್-2022 ಮಂಗಳೂರು ಇಲ್ಲಿ ಬೆಳ್ಳಿ ಪದಕ, ಏಷ್ಯನ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್-2022 ಚಿನ್ನದ ಪದಕ ಸಂಪಾದಿಸಿದ್ದಾರೆ.
ಇದೀಗ ಮಂಗಳೂರಿನ ಬಳ್ಳಾಲ್‌ಬಾಗ್‌ನಲ್ಲಿ ಸದ್ಗುರು ಫಿಟ್‌ನೆಸ್ ಎಂಡ್ ಸ್ಪೋರ್ಟ್ಸ್ ಎಂಬ ಕ್ರೀಡಾ ತರಬೇತಿ ಕೇಂದ್ರವನ್ನು ನಡೆಸುತ್ತಿದ್ದು, ಹಲವು ಯುವ ಪವರ್ ಲಿಫ್ಟರ್‌ಗಳಿಗೆ ತರಬೇತಿ ನೀಡುತ್ತಿದ್ದಾರೆ. ಮತ್ತಷ್ಟು ಸಾಧಿಸಬೇಕೆಂಬ ಛಲ ಹೊಂದಿರುವುದರಿಂದ ಕೆನಡಾದ ಕಾಮನ್‌ವೆಲ್ತ್ ಪವರ್ ಲಿಫ್ಟಿಂಗ್‌ನಲ್ಲಿ ಪದಕ ಪಡೆದ ಮಂಗಳೂರಿನ ಋತ್ವಿಕ್ ಹಾಗೂ ಜಿಮ್ಮೇಸಿಯಂ ಕಾರ್ ಸ್ಟ್ರೀಟ್ನ ಕೋಚ್ ಸತೀಶ್ ಕುಮಾರ್ ಕುದ್ರೋಳಿ ಅವರಿಂದ ಈಗಲೂ ತರಬೇತಿ ಪಡೆಯುತ್ತಿದ್ದಾರೆ.
![Mangaluru youth Pradeep Acharya achievement in power lifting](https://etvbharatimages.akamaized.net/etvbharat/prod-images/kn-mng-03-pradeep-photo-special-7202146_11082022164200_1108f_1660216320_1082.jpg)
'ಎಲ್ಲರಂತೆ ನಾನೂ ಸಹ ಬಡ ಕುಟುಂಬದಿಂದ ಬಂದವ. ಜೀವನದಲ್ಲಿ ಕಷ್ಟ-ನಷ್ಟಗಳನ್ನು ಎದುರಿಸಿದ್ದೇನೆ. ಸಾಧನೆ ಮಾಡಬೇಕೆಂಬ ಛಲ ಇತ್ತು. ಸ್ನಾತಕೋತ್ತರ ಪದವಿಯವರೆಗೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಆಗಲಿಲ್ಲ. ಆದರೆ, ಸ್ನಾತಕೋತ್ತರ ಪದವಿಯ ಬಳಿಕ ಪವರ್ ಲಿಫ್ಟಿಂಗ್‌ನಲ್ಲಿ ಸಾಧನೆ ಮಾಡಲು ನಿರ್ಧರಿಸಿದೆ. 10 ವರ್ಷದಲ್ಲಿ ಈ ಸಾಧನೆ ಮಾಡಲು ಸಾಧ್ಯವಾಯಿತು' ಎಂದು ಪ್ರದೀಪ್ ಕುಮಾರ್ ಆಚಾರ್ಯ ಹೇಳಿದರು.
ಇದನ್ನೂ ಓದಿ: ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಕಂಚಿನ ಪದಕ ಗೆದ್ದು ತಂದ ಕುಂದಾಪುರ ಕುವರನ ಸಾಧನೆಯ ಹಾದಿ