ಮಂಗಳೂರು: ಕೊರೊನಾ ಸೋಂಕು ಹರಡದಂತೆ ಪೊಲೀಸರು ವಾರಿಯರ್ಸ್ ಗಳಾಗಿ ದಿನನಿತ್ಯವೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಸಂದರ್ಭ ಸೋಂಕು ತಗುಲಿಸಿಕೊಳ್ಳದಂತೆ ಸಾಕಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ. ಇದಕ್ಕಾಗಿ ಪೊಲೀಸರ ಪತ್ನಿಯರೇ ಮಾಸ್ಕ್ ತಯಾರಿಕಾ ಕೈಂಕರ್ಯದಲ್ಲಿ ತೊಡಗಿದ್ದಾರೆ. ಈ ಬಗ್ಗೆ ವಿಶೇಷ ಸುದ್ದಿ ಇಲ್ಲಿದೆ.
ಕಳೆದ ಶನಿವಾರದಿಂದ ನಗರದ ಪೊಲೀಸ್ ಲೇನ್ ನಲ್ಲಿರುವ ಪೊಲೀಸ್ ಕ್ವಾಟರ್ಸ್ ನ ಜ್ಞಾನೋದಯ ಮಹಿಳಾ ಮಂಡಲದ ಶೇ. 10 ರಷ್ಟು ಸದಸ್ಯೆಯರು ಈ ಮಾಸ್ಕ್ ತಯಾರಿಕಾ ಕೈಂಕರ್ಯದಲ್ಲಿ ತೊಡಗಿದ್ದಾರೆ.
ದಿನಕ್ಕೆ ಕನಿಷ್ಠ ಪಕ್ಷ 60-70 ಮಾಸ್ಕ್ ಅನ್ನು ತಯಾರಿಸುತ್ತಿದ್ದು, ಪೊಲೀಸ್ ಯುನಿಫಾರ್ಮ್ ಬಣ್ಣವುಳ್ಳ ಬಟ್ಟೆಯದೇ ಮಾಸ್ಕ್ ತಯಾರಿಕೆ ಮಾಡುತ್ತಿದ್ದಾರೆ. ವಾರದೊಳಗೆ 10 ಸಾವಿರ ಮಾಸ್ಕ್ ತಯಾರಿಸಿ ಕೊಡುವ ಗುರಿ ಹೊಂದಲಾಗಿದೆ.
ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸುಮಾರು 2000 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ಕರ್ತವ್ಯದಲ್ಲಿರುವಾಗ ಧಾರಣೆ ಮಾಡಲು ಓರ್ವನಿಗೆ ತಲಾ 5 ಮಾಸ್ಕ್ ಗಳಂತೆ ನೀಡಬೇಕೆಂಬ ಚಿಂತನೆಯಲ್ಲಿ ಮಂಗಳೂರು ಪೊಲೀಸ್ ಆಯುಕ್ತರು ಮಹಿಳೆಯರಿಗೆ ಈ ಜವಾಬ್ದಾರಿಯನ್ನು ಒಪ್ಪಿಸಿದ್ದಾರೆ. ಮಾಸ್ಕ್ ತಯಾರಿಕೆಗೆ ಬೇಕಾದ ಬಟ್ಟೆ, ದಾರ ಹಾಗೂ ಎಲಸ್ಟಿಕ್ ಅನ್ನು ಪೊಲೀಸ್ ಇಲಾಖೆಯಿಂದಲೇ ಒದಗಿಸಲಾಗಿದೆ.
ಈ ಮಾಸ್ಕ್ ತಯಾರಿಕೆಯಲ್ಲಿ ತೊಡಗಿರುವ ಮಹಿಳೆಯರು ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರ ಪತ್ನಿಯರೇ ಆಗಿದ್ದು, ಎಲ್ಲರೂ ಸ್ಟಿಚ್ಚಿಂಗ್ ಹೊಲಿಗೆಯಲ್ಲಿ ತರಬೇತಿ ಪಡೆದವರಾಗಿದ್ದಾರೆ.
ಮೊದಲನೆ ಅಲೆಯ ಕೊರೊನಾ ಕಾಲಘಟ್ಟದಲ್ಲಿಯೂ ಇವರು ಮಾಸ್ಕ್ ತಯಾರಿಸಿ ಮಾರಾಟ ಮಾಡಿದ್ದರು. ಆದರೆ ಈ ಬಾರಿ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ಅವರ ಪ್ರೋತ್ಸಾಹದಿಂದ ಪೊಲೀಸರಿಗೆಂದೇ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಮಾಸ್ಕ್ ತಯಾರಿಕೆ ತೊಡಗಿಸಿಕೊಂಡಿದ್ದಾರೆ. ಆದರೂ ಪೊಲೀಸ್ ಆಯುಕ್ತರು ಈ ಮಹಿಳೆಯರ ಕಾರ್ಯಕ್ಕೆ ಸೂಕ್ತ ಗೌರವಧನ ನೀಡುವ ಕೊಡುವ ಆಲೋಚನೆಯಲ್ಲಿದ್ದಾರಂತೆ.