ಮಂಗಳೂರು: ನಗರದ ಉತ್ತರ ವಿಭಾಗದ ಪಣಂಬೂರಿನಲ್ಲಿ ನೂತನವಾಗಿ ನಿರ್ಮಾಣವಾಗಿರುವ 112 ಪೊಲೀಸ್ ಸಿಬ್ಬಂದಿಯ ವಸತಿ ಗೃಹಗಳ ಸಂಕಿರ್ಣವನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಇಂದು ಹಸ್ತಾಂತರಿಸಿದರು.
ಬಳಿಕ ಮಾತನಾಡಿದ ಸಚಿವರು, ರಾಜ್ಯ ಸರ್ಕಾರ ಈಗಾಗಲೇ ಶೇ 51 ಮಂದಿ ಪೊಲೀಸರಿಗೆ ವಸತಿ ಗೃಹಗಳನ್ನು ನಿರ್ಮಿಸಿದೆ. ಕನಿಷ್ಠ ಶೇ 75 ಮಂದಿ ಪೊಲೀಸರಿಗೆ ವಸತಿ ಕಲ್ಪಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ. ಮುಂದಿನ ಐದು ವರ್ಷಗಳಲ್ಲಿ ರಾಜ್ಯಾದ್ಯಂತ ಪೊಲೀಸರಿಗೆ 11 ಸಾವಿರ ವಸತಿಗಳನ್ನು ನಿರ್ಮಾಣ ಮಾಡಿ ಕೊಡಲಾಗುತ್ತದೆ. ಈ ಮೂಲಕ ಶೇ 60ರಷ್ಟು ಪೊಲೀಸ್ ಸಿಬ್ಬಂದಿಗೆ ಮನೆ ನಿರ್ಮಾಣ ಮಾಡಿ ಕೊಟ್ಟಂತಾಗುತ್ತದೆ ಎಂದು ಹೇಳಿದರು.
ಈ ಬೃಹತ್ ಕಾರ್ಯಕ್ರಮ ಜನವರಿಯಿಂದ ಆರಂಭವಾಗುತ್ತಿದ್ದು, ಅದಕ್ಕೆ ಪೂರಕವಾಗಿ ಸ್ಥಳ ಗುರುತಿಸುವ ಕಾರ್ಯ ಮಾಡಲಾಗುತ್ತದೆ. ಮಂಗಳೂರಿನಲ್ಲಿ 192 ಗೃಹ ನಿರ್ಮಾಣ ಮಾಡಬೇಕೆಂಬ ಬೇಡಿಕೆ ಇದೆ. ಅದರಲ್ಲಿ ಈಗಾಗಲೇ ಮೊದಲ ಹಂತದಲ್ಲಿ 74 ಗೃಹಗಳು ಮಂಜೂರಾತಿಯಾಗಿದೆ. ಇದನ್ನು ನೂರು ಮನೆಗಳಿಗೆ ಹೆಚ್ಚಳ ಮಾಡಲು ನಾನು ತಕ್ಷಣ ಆದೇಶಿಸುತ್ತೇನೆ ಎಂದು ಬೊಮ್ಮಾಯಿ ಹೇಳಿದರು.
ಉಳಿದ ಮನೆ ನಿರ್ಮಾಣಕ್ಕೆ ನಿವೇಶನ ಗೊತ್ತುಪಡಿಸಿದ್ದಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ. ಜೊತೆಗೆ ಪೊಲೀಸ್ ಸಿಬ್ಬಂದಿಯ ಉನ್ನತ ಶಿಕ್ಷಣಕ್ಕೂ ಅಗತ್ಯ ನೆರವು ನೀಡುವ ಚಿಂತನೆಯೂ ಇದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ರಘುಪತಿ ಭಟ್, ಮಂಗಳೂರು ಪೊಲೀಸ್ ಆಯುಕ್ತ ವಿಕಾಸ್ ಕುಮಾರ್, ಉಪ ಪೊಲೀಸ್ ಆಯುಕ್ತ ವಿನಯ್ ಗಾಂವ್ಕರ್ ಉಪಸ್ಥಿತರಿದ್ದರು.