ಮಂಗಳೂರು: ನಗರದ ಆ್ಯಕ್ಸಿಡೆಂಟ್ ಸ್ಪಾಟ್ ಎಂದು ಕುಖ್ಯಾತಿ ಪಡೆದ ನಂತೂರಿನಲ್ಲಿ ರಸ್ತೆ ಗುಂಡಿಮಯವಾಗಿ ಮಾರ್ಪಟ್ಟಿದೆ. ಇದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿತ್ತು. ಇದೀಗ ಈ ಗುಂಡಿಗಳನ್ನು ಪೊಲೀಸರೇ ಮುಚ್ಚುತ್ತಿರುವ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಹಿಂದೆ ನಂತೂರಿನಲ್ಲಿನ ರಸ್ತೆ ಗುಂಡಿಗಳಿಂದ ಅಪಘಾತ ಸಂಭವಿಸಿ ಹಲವರು ತಮ್ಮ ಜೀವ ಕಳೆದುಕೊಂಡಿದ್ದರು. ಈ ಸಂಭಾವ್ಯ ಅಪಾಯ ಹಾಗೂ ಸಂಚಾರ ಅಡಚಣೆಯನ್ನು ತಪ್ಪಿಸಲು ನಂತೂರಿನ ರಸ್ತೆ ಮಧ್ಯದ ಗುಂಡಿಗಳನ್ನು ಮಂಗಳೂರು ನಗರದ ಸಂಚಾರಿ ಪೊಲೀಸರೇ ಸ್ವತಃ ಮುಚ್ಚಿದ್ದಾರೆ.
ಮಂಗಳೂರು ದಕ್ಷಿಣ ವಿಭಾಗದ ಸಂಚಾರಿ ಠಾಣೆಯ ಸಬ್ಇನ್ಸ್ಪೆಕ್ಟರ್ ಈಶ್ವರ ಸ್ವಾಮಿ, ಎಎಸ್‌ಐ ವಿಶ್ವನಾಥ ರೈ ಅವರು ಹಾರೆ, ಗುದ್ದಲಿ ಹಿಡಿದು ರಸ್ತೆ ಗುಂಡಿಯನ್ನು ಮುಚ್ಚುವ ಕಾರ್ಯವನ್ನು ಮಾಡಿದ್ದಾರೆ. ಈ ಹಿಂದೆ ಒಂದೆರಡು ಬಾರಿ ಈ ರಸ್ತೆ ಗುಂಡಿಗಳಿಗೆ ತೇಪೆ ಹಾಕುವ ಕಾರ್ಯಗಳು ನಡೆದಿತ್ತು. ಆದರೆ ಕೆಲವೇ ದಿನಗಳ ನಂತರ ರಸ್ತೆ ಮತ್ತೆ ಗುಂಡಿ ಮಯವಾಗಿದೆ ಎಂದು ವಾಹನ ಸವಾರರು ಆರೋಪಿಸುತ್ತಿದ್ದಾರೆ. ಇಲ್ಲಿ ವಾಹನ ಸವಾರರು ಅದರಲ್ಲೂ ದ್ವಿಚಕ್ರ ಸವಾರರು ಜೀವ ಕೈಯಲ್ಲಿ ಹಿಡಿದೇ ಸಂಚರಿಸಬೇಕಾದ ದುಃಸ್ಥಿತಿ ಇದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಬರುವ ನಂತೂರಿನ ತಿರುವಿನ ರಸ್ತೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಗುಂಡಿಗಳು ನಿರ್ಮಾಣವಾಗಿವೆ. ನಗರದ ರಸ್ತೆಗಳೊಂದಿಗೆ ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು ಕೂಡ ಇಲ್ಲಿ ಹಾದು ಹೋಗುತ್ತವೆ. ಇದರಿಂದ ಸಂಚಾರ ವ್ಯವಸ್ಥೆಗೂ ಭಾರಿ ತೊಂದರೆ ಆಗುತ್ತಿತ್ತು. ಇದೀಗ ಪೊಲೀಸರೇ ಗುಂಡಿಗಳನ್ನು ಮುಚ್ಚಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ:ಸಾರಿಗೆ ಬಸ್ ಬ್ರೇಕ್ ಫೇಲ್: ಚಾಲಕನ ಸಮಯ ಪ್ರಜ್ಞೆಯಿಂದ ಉಳಿದವು 40 ಬಡ ಜೀವಗಳು!
ಈ ಹಿಂದಿನ ಘಟನೆ: ಇತ್ತೀಚಿಗೆ, ಚಿಕ್ಕಮಗಳೂರಿನ ಆಲ್ದೂರಿನಲ್ಲಿ ಪೊಲೀಸರು ರಸ್ತೆಗೆ ಮಣ್ಣು ಸುರಿದು ಗುಂಡಿಗಳನ್ನು ಮುಚ್ಚಿದ್ದರು. ತಮ್ಮ ಕೆಲಸದ ಒತ್ತಡದ ಮಧ್ಯೆಯೂ ಪೊಲೀಸರು ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ಮಾಡಿದ್ದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಚಿಕ್ಕಮಗಳೂರು - ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ಯಥೇಚ್ಛವಾಗಿ ಗುಂಡಿಗಳಿವೆ. ಅದರಲ್ಲೂ, ಚಿಕ್ಕಮಗಳೂರು ತಾಲೂಕಿನ ಆಲ್ದೂರಿನ ರಸ್ತೆಯಲ್ಲಿ ವಾಹನ ಸವಾರರು ಸಂಚರಿಸುವುದೇ ದುಸ್ತರವಾಗಿತ್ತು.
ಈ ಮಾರ್ಗದಲ್ಲಿ ಶಾಲೆ ಕೂಡ ಇದ್ದು, ಹೆಚ್ಚಿನ ಅಪಘಾತಗಳು ಸಂಭವಿಸಿದೆ. ಗುಂಡಿ ತಪ್ಪಿಸಲು ಹೋಗಿ ಬಿದ್ದು-ಎದ್ದು ಹೋಗುವ ಬೈಕ್ ಸವಾರರ ಸಂಖ್ಯೆಗೇನು ಕೊರತೆ ಇರಲಿಲ್ಲ. ಹಾಗಾಗಿ, ಪೊಲೀಸರೇ ಮೂರು ಟ್ರ್ಯಾಕ್ಟರ್ ಮಣ್ಣು ತರಿಸಿ, ಸಮವಸ್ತ್ರ ಧರಿಸಿಯೇ ಕೈಯ್ಯಲ್ಲಿ ಗುದ್ದಲಿ ಹಿಡಿದು ರಸ್ತೆಗೆ ಮಣ್ಣು ತುಂಬಿಸಿದ್ದರು. ಶಾಲಾ ಮಕ್ಕಳು ಓಡಾಡುವ ಜಾಗ ಹಾಗೂ ರಸ್ತೆಯ ಗುಂಡಿಗಳಿಂದ ಹೆಚ್ಚು ಅಪಘಾತ ಸಂಭವಿಸುತ್ತಿವೆ ಎಂದು ಅರಿತು ಶ್ರಮದಾನದ ಮೂಲಕ ರಸ್ತೆಗೆ ಮಣ್ಣು ಹಾಕಿ, ಗುಂಡಿ ಮುಚ್ಚಿದ್ದಾರೆ. ಈ ವೇಳೆ ಸರ್ಕಲ್ ಇನ್ಸ್ಪೆಕ್ಟರ್ ಸತ್ಯನಾರಾಯಣ, ಪಿಎಸ್‍ಐ ಅಕ್ಷಿತಾ ಹಾಗೂ ಕೀರ್ತಿಕುಮಾರ್ ಉಪಸ್ಥಿತರಿದ್ದರು.