ಮಂಗಳೂರು (ದ.ಕ): ಕೊರೊನಾ ಸಂಕಷ್ಟದ ಸಮಯದಲ್ಲಿ ಸರ್ಕಾರವು ರೂಪಿಸಿರುವ ನಿಯಮಾವಳಿಗಳನ್ನು ಪಾಲನೆಯಾಗುವಂತೆ ನೋಡಿಕೊಳ್ಳಬೇಕಾದದ್ದು ಪೊಲೀಸರ ಕರ್ತವ್ಯ. ಹೀಗೆ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ಸರಿಯಾದ ಆಹಾರ ಸಿಗದೇ ಸಂಕಷ್ಟ ಪಡುವ ಪರಿಸ್ಥಿತಿ ಇರುತ್ತದೆ. ಇದಕ್ಕೆ ಪರಿಹಾರವಾಗಿ ಮಂಗಳೂರಿನಲ್ಲಿ ಪೊಲೀಸ್ ಕ್ಯಾಂಟೀನ್ ಆರಂಭವಾಗಿದೆ.
ದೇಶದೆಲ್ಲೆಡೆ ಕೊರೊನಾ 2ನೇ ಅಲೆ ವ್ಯಾಪಕವಾಗಿ ಹಬ್ಬುತ್ತಿದೆ. ಇದನ್ನು ನಿಯಂತ್ರಿಸಲು ರಾಜ್ಯದಲ್ಲಿ ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ. ಈ ನಿಯಮಾವಳಿ ಪಾಲನೆ ಆಗುವಂತೆ ನೋಡಿಕೊಳ್ಳುವುದರಲ್ಲಿ ಪೊಲೀಸರ ಬಹುದೊಡ್ಡ ಜವಾಬ್ದಾರಿಯಿದೆ. ಹೀಗೆ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ಸಮಯಕ್ಕೆ ಸರಿಯಾಗಿ ಊಟದ ವ್ಯವಸ್ಥೆ ಇಲ್ಲದೇ ಸಂಕಷ್ಟ ಪಡುವಂತಾಗುತ್ತದೆ.
ತಾತ್ಕಾಲಿಕ ಕ್ಯಾಟೀನ್ ಕಾರ್ಯಾರಂಭ
ಹೋಟೆಲ್ಗಳು ತೆರೆದಿಲ್ಲದಿರುವುದು, ಹೋಟೆಲ್ ತೆರೆದರೂ ಅಲ್ಲಿ ಕೊರೊನಾ ಭಯ ಕಾಡುವ ಮೂಲಕ ನೆಮ್ಮದಿಯಿಂದ ಊಟ ಮಾಡಲು ಅಸಾಧ್ಯವಾಗಿದೆ. ಈ ಹಿನ್ನೆಲೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಅವರ ಮುತುವರ್ಜಿಯಲ್ಲಿ ಮಂಗಳೂರಿನಲ್ಲಿ ಪೊಲೀಸ್ ಕ್ಯಾಂಟೀನ್ ಆರಂಭವಾಗಿದೆ. ಮಂಗಳೂರು ಪೊಲೀಸ್ ಕಮೀಷನರ್ ಕಚೇರಿಯ ಆವರಣದಲ್ಲಿ ತಾತ್ಕಾಲಿಕವಾಗಿ ಕ್ಯಾಂಟೀನ್ ಆರಂಭಿಸಲಾಗಿದೆ.
ಇನ್ನೂ ಈ ವ್ಯವಸ್ಥೆ ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರಲ್ಲಿ ಹರ್ಷ ತಂದಿದೆ. ಕಳೆದ ಬಾರಿ ಕೊರೊನಾ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಊಟಕ್ಕೆ ಸಮಸ್ಯೆ ಯಾಗಿತ್ತು. ಹೊರಜಿಲ್ಲೆಯಿಂದ ಬಂದ ಪೊಲೀಸರಂತೂ ಸರಿಯಾದ ಸಮಯದಲ್ಲಿ ಊಟ ಸಿಗದೆ ಸಂಕಷ್ಟಪಟ್ಟಿದ್ದು, ಇದೀಗ ಪೊಲೀಸ್ ಕ್ಯಾಂಟೀನ್ನಿಂದ ಇವರ ಸಮಸ್ಯೆ ನಿವಾರಣೆಯಾಗಿದೆ.
ಮಂಗಳೂರು ನಗರದಲ್ಲಿ ಕರ್ತವ್ಯ ನಿರ್ವಹಿಸುವ ಸುಮಾರು 300 ಮಂದಿ ಪೊಲೀಸರು ಇದರ ಪ್ರಯೋಜನ ಪಡೆಯಲಿದ್ದಾರೆ. ನಗರದಲ್ಲಿ ಮನೆ ಇಲ್ಲದೇ, ಊಟಕ್ಕೆ ಹೋಟೆಲ್ ಆಶ್ರಯಿಸಿರುವ ಪೊಲೀಸರಿಗೆ ಕೊರೊನಾ ಸಂದರ್ಭದಲ್ಲಿ ಈ ಉಚಿತ ಊಟದ ವ್ಯವಸ್ಥೆ ತುಂಬಾ ಪ್ರಯೋಜನಕಾರಿಯಾಗಿದೆ.
ಇದನ್ನೂ ಓದಿ: ದಿಢೀರ್ ಕಾರ್ಯಾಚರಣೆ: ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದ ಮನಪಾ ಅಧಿಕಾರಿಗಳು