ಮಂಗಳೂರು: 2019 ಡಿಸೆಂಬರ್ 19ರಂದು ನಗರದಲ್ಲಿ ನಡೆದ ಗೋಲಿಬಾರ್ ಪ್ರಕರಣದ ಬಗ್ಗೆ ಮ್ಯಾಜಿಸ್ಟ್ರೀರಿಯಲ್ ತನಿಖೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಡೆಯಲ್ಲಿ ಉಳಿದ 8 ಮಂದಿಗೆ ಫೆ.13ರಂದು ಸಾಕ್ಷಿ ನುಡಿಯಲು ಸಮಯ ನೀಡಿದ್ದಾರೆ. ಅಲ್ಲದೆ ಘಟನೆಯ ವೀಡಿಯೋಗಳಿದ್ದರೆ ಅಂದೇ ನೀಡಬಹುದು ಎಂದು ತನಿಖಾಧಿಕಾರಿ ತಿಳಿಸಿರುವುದಾಗಿ ಮುಸ್ಲಿಂ ಸೆಂಟ್ರಲ್ ಕಮಿಟಿ ಕಾರ್ಯದರ್ಶಿ ಡಿ.ಎಂ.ಅಸ್ಲಂ ಹೇಳಿದ್ದಾರೆ.
ಯಾವುದೇ ನಿರಪರಾಧಿಗಳಿಗೆ ಶಿಕ್ಷೆಯಾಗಬಾರದು ಅನ್ನೋದು ನಮ್ಮ ಉದ್ದೇಶ. ಘಟನೆ ವೇಳೆ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ. 200 ಮಂದಿಯನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ ಎಂದರೆ ಇದೊಂದು ದುರಂತವೇ ಸರಿ. ಪೊಲೀಸರಲ್ಲಿ ವಿಡಿಯೋ ದಾಖಲೆಗಳಿವೆ. ಈಗಾಗಲೇ ತನಿಖೆಯೂ ನಡೆಯುತ್ತಿದೆ. ಅಪರಾಧಿಗಳು ಯಾರಿದ್ದಾರೋ ಅವರಿಗೆ ಶಿಕ್ಷೆ ನೀಡಲಿ ಎಂದರು.
ಗೋಲಿಬಾರ್ ಘಟನೆಯಿಂದ ಸುಮಾರು 30 ಮಂದಿ ಜೈಲು ಸೇರಿದ್ದಾರೆ. ಅವರ ಮೇಲೆ ಪದೇ ಪದೇ ಕೇಸ್ ದಾಖಲಿಸಲಾಗುತ್ತಿದೆ. ಅವರಿಗೆ ಜಾಮೀನು ಪಡೆಯಲು ಪೊಲೀಸರು ಅವಕಾಶವೇ ನೀಡುತ್ತಿಲ್ಲ, ಇದು ಅನ್ಯಾಯ. ಜೈಲಿನಲ್ಲಿರುವವರಲ್ಲಿ 50 ಶೇ. ಮಂದಿ ನಿರಪರಾಧಿಗಳು. ನಮಗೆ ನ್ಯಾಯ ದೊರಕುತ್ತದೆ ಎಂಬ ಭರವಸೆಯಿದೆ. ಇಡೀ ರಾಷ್ಟ್ರಾದ್ಯಂತ ದೊಡ್ಡ ಮಟ್ಟದ ಪ್ರತಿಭಟನೆಗಳು ನಡೆಯಿತು. ಆದರೆ ಇಷ್ಟು ಸಣ್ಣ ಜಿಲ್ಲೆಯಲ್ಲಿ ಪೊಲೀಸರಿಗೆ 200 ಮಂದಿಯನ್ನು ಹತೋಟಿಗೆ ತರಲು ಸಾಧ್ಯವಾಗದೆ ಗೋಲಿಬಾರ್ ಮಾಡಿ ಇಬ್ಬರನ್ನು ಹತ್ಯೆ ಮಾಡಿದ್ದಾರೆ. ಈಗ ಪೊಲೀಸರು ತಮ್ಮ ತಪ್ಪನ್ನು ಮುಚ್ಚಿಹಾಕಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಿದ್ದಾರೆ. ಇಂತಹ ಅನ್ಯಾಯ ಮಾಡುವುದು ಬೇಡ. ತಪ್ಪಾಗಿದ್ದರೆ ತಪ್ಪೆಂದು ಒಪ್ಪಿಕೊಳ್ಳಲಿ. ಕಾನೂನನ್ನು ದುರುಪಯೋಗ ಮಾಡುವುದು ಬೇಡ. ನಿರಪರಾಧಿಗಳಿಗೆ ನ್ಯಾಯ ದೊರಕಲಿ. ಈ ವಿಷಯವನ್ನು ಆದಷ್ಟು ಬೇಗ ಮುಗಿಸುವ ಪ್ರಯತ್ನ ಮಾಡಿ. ಮತ್ತಷ್ಟು ದಿನ ಉದ್ದಕ್ಕೆ ಎಳೆಯಬೇಡಿ ಎಂದು ಪೊಲೀಸರ ವಿರುದ್ಧ ಕಿಡಿ ಕಾರಿದರು.