ಮಂಗಳೂರು: ಕಳೆದ ವರ್ಷದಲ್ಲಿ ಜಾರಿಗೆ ಬಂದಿರುವ ಪ್ರಧಾನಮಂತ್ರಿ ಗತಿಶಕ್ತಿ ಯೋಜನೆ ಮಹಾತ್ವಾಕಾಂಕ್ಷೆಯದ್ದಾಗಿದ್ದು, ಭಾರತವನ್ನು ಟ್ರಿಲಿಯನ್ ಆರ್ಥಿಕತೆಯಾಗಿ ರೂಪಿಸುವ ಉದ್ದೇಶವನ್ನು ಹೊಂದಿದೆ. ಅದರಲ್ಲಿ ಕನಿಷ್ಠ 1 ಟ್ರಿಲಿಯನ್ ಆರ್ಥಿಕತೆಯ ಕೊಡುಗೆ ನಮ್ಮದಾಗಬೇಕೆಂದು ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದು, ಆ ನಿಟ್ಟಿನಲ್ಲಿ ಎಲ್ಲ ಪ್ರಯತ್ನ ಮಾಡಲಾಗುವುದು ಎಂದು ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್ ಹೇಳಿದರು.
ನವಮಂಗಳೂರು ಬಂದರು ಪ್ರಾಧಿಕಾರ, ಮರ್ಮಗೋವಾ ಹಾಗೂ ಕೊಚ್ಚಿ ಬಂದರು ಪ್ರಾಧಿಕಾರಗಳ ಸಹಯೋಗದಲ್ಲಿ ಹಮ್ಮಿಕೊಂಡ ಪಿಎಂ ಗತಿ ಶಕ್ತಿ ಮಲ್ಟಿಮೋಡಲ್ ಮೆರಿಟೈಂ ರೀಜನಲ್ ಸಮಿಟ್ -2022 ಉದ್ಘಾಟನಾ ಸಮಾರಂಭದಲ್ಲಿ ಅವರು ಅತಿಥಿಯಾಗಿ ವರ್ಚುವಲ್ ಮೂಲಕ ಪಾಲ್ಗೊಂಡು ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಕೇಂದ್ರ ಬಂದರು, ನೌಕಾಯಾನ ಸಚಿವಾಲಯದ ಮಲ್ಟಿಮೋಡಲ್ ಕನೆಕ್ಟಿವಿಟಿ ಕಮಿಟಿ ಅಧ್ಯಕ್ಷ ವಿನೀತ್ ಕುಮಾರ್ ಮಾತನಾಡಿ, ಹಲವು ಇಲಾಖೆಗಳ ಸಮನ್ವಯದ ಉದ್ದೇಶದಿಂದ ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ. ಇದಕ್ಕಾಗಿ ಇಸ್ರೋ ನೆರವು ಪಡೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಒಂದು ವರ್ಷದ ಹಿಂದೆ ಈ ಯೋಜನೆ ಜಾರಿಯಾಗಿದೆ. ಇನ್ನು ಎಲ್ಲ ಇಲಾಖೆಗಳು ಅದರಲ್ಲಿ ಪೂರ್ಣವಾಗಿ ತಯಾರಾಗಿಲ್ಲ. ಹಾಗಿರುವಾಗ ಎಲ್ಲವನ್ನೂ ಒಟ್ಟು ಸೇರಿಸಿಕೊಂಡು ಸಮನ್ವಯದಿಂದ ಕೆಲಸ ಮಾಡಲು ಬೇಕಾದ ಸವಾಲುಗಳು ನಮ್ಮ ಮುಂದಿದೆ. ಮುಂದೆ ಗತಿಶಕ್ತಿ ಪೋರ್ಟಲ್ ಬಳಸಿಕೊಂಡು ಬಂದರುಗಳ ವಿವಿಧ ಯೋಜನೆಗಳ ಅನುಮೋದನೆಗಳನ್ನು ಸುಲಭವಾಗಿ ಪಡೆಯುವ ಸಾಧ್ಯತೆಯೂ ಇದೆ ಎಂದರು.
ನವಮಂಗಳೂರು ಬಂದರು ಪ್ರಾಧಿಕಾರದ ಅಧ್ಯಕ್ಷ ಡಾ. ಎ. ವಿ ರಮಣ ಮಾತನಾಡಿ, ಪಿಎಂಗತಿಶಕ್ತಿ ಯೋಜನೆಯಡಿ ನೌಕಾಯಾನ ಮತ್ತು ಬಂದರು ಸಚಿವಾಲಯದಡಿ 101 ಯೋಜನೆಗಳನ್ನು 2024 ರ ಒಳಗೆ ಪೂರ್ಣಗೊಳಿಸಬೇಕಾಗಿದೆ. ಇದರಲ್ಲಿ ನವಮಂಗಳೂರು ಬಂದರು ವ್ಯಾಪ್ತಿಯ ಬರ್ತ್ ನಂ. 14, ಬರ್ತ್ ನಂ. 17 ಮತ್ತು ಕುಳಾಯಿ ಮೀನುಗಾರಿಕಾ ಜೆಟ್ಟಿ ಕೂಡ ಸೇರಿಕೊಂಡಿದೆ ಎಂದರು.
ಕೊಚ್ಚಿ ಪೋರ್ಟ್ ಉಪಾಧ್ಯಕ್ಷ ವಿಕಾಸ್ ನಲ್ವಾರ್, ಮರ್ಮಗೋವಾ ಪೋರ್ಟ್ ಉಪಾಧ್ಯಕ್ಷ ಜಿ ಪಿ ರೈ , ಎನ್‌ಎಂಪಿಎ ಉಪಾಧ್ಯಕ್ಷ ಕೆ ಜಿ ನಾಥ್ ಹಾಜರಿದ್ದರು.
ಇದನ್ನೂ ಓದಿ: 'ಪಿಎಂ ಗತಿ ಶಕ್ತಿ' ಯೋಜನೆಯಡಿ 50,000 ಕೋಟಿ ರೂ. ಮೀಸಲಿಟ್ಟ ಭಾರತೀಯ ರೈಲ್ವೆ