ಮಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ 2024ರ ಮಕರ ಸಂಕ್ರಾಂತಿಗೆ ಪೂರ್ಣವಾಗಲಿದೆ ಎಂದು ರಾಮಮಂದಿರ ನಿರ್ಮಾಣ ಟ್ರಸ್ಟ್ನ ಸದಸ್ಯರಲ್ಲೊಬ್ಬರಾದ ಉಡುಪಿಯ ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಮಂಗಳೂರಿನ ಕದ್ರಿಯ ಮಂಜುಪ್ರಸಾದದಲ್ಲಿ ಪೇಜಾವರ ಮಠದ ಪಟ್ಟದ ದೇವರ ತುಲಾಭಾರ ಮತ್ತು ಗುರುವಂದನಾ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಕಾರ್ಯ ಕ್ಷಿಪ್ರಗತಿಯಲ್ಲಿ ನಡೆಯುತ್ತಿದೆ. 2024 ರ ಮಕರ ಸಂಕ್ರಾಂತಿಯ ಉತ್ತರಾಯಣದ ಪರ್ವ ಕಾಲದಲ್ಲಿ ಮಂದಿರದಲ್ಲಿ ಶ್ರೀರಾಮ ಪ್ರತಿಷ್ಠಾಪನ ಕಾರ್ಯ ನೆರವೇರಲಿದೆ ಎಂದರು.
ಟ್ರಸ್ಟ್ನ ಮೂಲ ಉದ್ದೇಶ ಶ್ರೀರಾಮ ಮಂದಿರ ನಿರ್ಮಾಣವಾಗಿದ್ದರೂ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಂಡ ಬಳಿಕ ರಾಮ ರಾಜ್ಯದ ಸದುದ್ದೇಶದಲ್ಲಿ ಗ್ರಾಮಗಳನ್ನು ದತ್ತು ಪಡೆಯುವುದು ಸೇರಿದಂತೆ ಸಮಾಜಮುಖಿ ಕಾರ್ಯಗಳು ನಡೆಯಲಿದೆ ಎಂದು ಹೇಳಿದರು.
ಅನಾಗರಿಕರನ್ನು ನಿಷ್ಪಕ್ಷಪಾತವಾಗಿ ಮಟ್ಟಹಾಕಬೇಕು: ನೂಪುರ್ ಶರ್ಮ ಬೆಂಬಲಿಸಿ ಪೋಸ್ಟ್ ಹಾಕಿದ ವ್ಯಕ್ತಿಯನ್ನು ಶಿರಚ್ಛೇದನ ಮಾಡಿದ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು ನಾಗರಿಕ ಸಮಾಜದಲ್ಲಿ ಅನಾಗರಿಕರು ಇರುತ್ತಾರೆ. ಅವರನ್ನು ಮಟ್ಟಹಾಕುವ ಕೆಲಸವನ್ನು ಸರ್ಕಾರಗಳು ನಿಷ್ಪಕ್ಷಪಾತವಾಗಿ ಮಾಡಬೇಕು ಎಂದರು.
ಓದಿ: ಉನ್ನತ ಶಿಕ್ಷಣ ವ್ಯಾಸಂಗಕ್ಕೆ ಜುಲೈ 11 ರಿಂದ ಪ್ರವೇಶ ಆರಂಭ: ಸಚಿವ ಅಶ್ವತ್ಥ ನಾರಾಯಣ