ಮಂಗಳೂರು: ಇವರು ಹರೇಕಳ ಹಾಜಬ್ಬ. ಮಾಸಿದ ಬಣ್ಣದ ಲುಂಗಿ, ಇಸ್ತ್ರಿ ಹಾಕದ ಅಂಗಿ ತೊಟ್ಟು ಶಾಲೆ ಕಟ್ಟಿದ ಇವರು ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದ ವ್ಯಕ್ತಿ. ಇವರು ಮಾಡಿದ ಸಾಮಾಜಿಕ ಕಾರ್ಯಕ್ಕೆ ಈಗ ದೇಶದ ಅತ್ಯುನ್ನತ ಪದ್ಮಶ್ರೀ ಪುರಸ್ಕಾರ ಮುಡಿಗೇರಿದೆ.
ಹರೇಕಳದಲ್ಲಿ ಪುಟ್ಟ ಮನೆಯೊಂದರಲ್ಲಿ ವಾಸವಾಗಿದ್ದ ಹರೇಕಳ ಹಾಜಬ್ಬ ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆಯಲ್ಲಿ ಕಿತ್ತಲೆ ವ್ಯಾಪಾರ ಮಾಡುತ್ತಿದ್ದವರು. ಇವರು ಕಿತ್ತಲೆ ವ್ಯಾಪಾರ ಮಾಡುತ್ತಿದ್ದಾಗ ತನ್ನೂರಿನ ಶಾಲೆಯನ್ನು ಅಭಿವೃದ್ಧಿ ಮಾಡಬೇಕೆಂಬ ಕನಸು ಹೊತ್ತರು. ಹರೇಕಳ ನ್ಯೂ ಪಡ್ಪುವಿನಲ್ಲಿರುವ ಸರ್ಕಾರಿ ಶಾಲೆಗೆ ಸರಿಯಾದ ವ್ಯವಸ್ಥೆ ಎಂಬುದಿರಲಿಲ್ಲ. ಶಾಲೆಗೆ ಬೇಕಾದ ಜಾಗವಿರಲಿಲ್ಲ. ಸರಿಯಾದ ಕಟ್ಟಡವಿರಲಿಲ್ಲ. ಶಾಲೆಯನ್ನು ಉಳಿಸಬೇಕಿದ್ದರೆ ಶಾಲೆಗೆ ಬೇಕಾದ ಅಭಿವೃದ್ಧಿ ಕೆಲಸ ಮಾಡಬೇಕು. ಇದಕ್ಕಾಗಿ ತನ್ನಲ್ಲಿ ನಯಾಪೈಸೆ ಇಲ್ಲದಿದ್ದರೂ ಶಾಲೆಯನ್ನು ಅಭಿವೃದ್ಧಿ ಮಾಡುವ ಪಣ ತೊಟ್ಟರು. ಆಗಿನ ಶಾಸಕ ಯು.ಟಿ ಫರೀದ್ ಬೆನ್ನು ಬಿದ್ದರು. ಶಾಲೆಯ ಅಭಿವೃದ್ಧಿ ಗಾಗಿ ದಾನಿಗಳ ಬೆನ್ನು ಬಿದ್ದ ಅವರು ಹಳೆ ಶಾಲೆಯ ಕಟ್ಟಡಕ್ಕೆ ಸುಣ್ಣ-ಬಣ್ಣ, ಹೊಸ ಕಟ್ಟಡ, ಮಕ್ಕಳ ಆಟಕ್ಕೆ ಗ್ರೌಂಡ್ ನಿರ್ಮಾಣ ಮಾಡಲು ಮುಂದಾದರು. ಇದಕ್ಕಾಗಿ ದಾನಿಗಳ ನೆರವು ಪಡೆದು ಶಾಲೆಗೆ ಜಾಗವನ್ನು ಖರೀದಿಸಿದರು. ಶಾಲೆಗೆ ಕಂಪೌಂಡ್ ನಿರ್ಮಾಣ, ಬಾವಿ, ಹೊಂಡವನ್ನು ಮುಚ್ಚಿ ದಾರಿ ವ್ಯವಸ್ಥೆ ಮಾಡಿದರು.
ಇನ್ನೂ ಪ್ರಾಥಮಿಕ ಶಾಲೆಯ ಶಿಕ್ಷಣದ ಬಳಿಕ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೌಢಶಾಲಾ ಶಿಕ್ಷಣ ಬೇಕೆಂದು ಕನಸು ಕಂಡ ಹಾಜಬ್ಬ, ಅದನ್ನು ಯಶಸ್ವಿಯಾಗಿ ಮಾಡಿದ್ದಾರೆ. ಅವರ ಅವಿರತ ಪ್ರಯತ್ನದಿಂದ ಹೊಸ ಕಟ್ಟಡದಲ್ಲಿ ಪ್ರೌಢಶಾಲೆ ನಿರ್ಮಾಣವಾಗಿದೆ. ಇದೆಲ್ಲವೂ ನನ್ನದೆನ್ನಲ್ಲ. ಎಲ್ಲ ದಾನಿಗಳ ನೆರವು ಎಂದು ನೆನಪಿಸಿಕೊಳ್ಳುತ್ತಾರೆ ಹಾಜಬ್ಬ.
ಸಿಕ್ಕ ಪ್ರಶಸ್ತಿ ಮೊತ್ತವು ಶಾಲೆಗೆ ದಾನ: ಇವರ ಸಾಧನೆ ಹೊರಜಗತ್ತಿಗೆ ತಿಳಿಯುತ್ತಿದ್ದಂತೆ ವಿವಿಧ ಮಾಧ್ಯಮ ಸಂಸ್ಥೆ, ಸಂಘ ಸಂಸ್ಥೆಗಳು ಇವರನ್ನು ಪುರಸ್ಕರಿಸಿ ಸನ್ಮಾನಿಸಿ ಪ್ರಶಸ್ತಿಯನ್ನು ನೀಡಿದವು. ಮಾಧ್ಯಮ ಸಂಸ್ಥೆಯೊಂದು ನೀಡಿದ ಐದು ಲಕ್ಷ ರೂ ಸೇರಿದಂತೆ ತನಗೆ ಬಂದ ಎಲ್ಲಾ ಪ್ರಶಸ್ತಿ ಹಣವನ್ನು ಇವರು ಶಾಲೆಯ ಅಭಿವೃದ್ಧಿಗೆ ನೀಡಿದ್ದು ವಿಶೇಷ. ಇವರಲ್ಲಿ ಈಗ ಇರುವುದು ಕೇವಲ ಪದಕಗಳು ಮಾತ್ರ. ಇವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಪ್ರತಿಷ್ಠಿತ ಪ್ರಶಸ್ತಿಗಳು ಸಿಕ್ಕಿವೆ.
ಕರ್ನಾಟಕ ಮಾತ್ರವಲ್ಲದೆ ಕೇರಳದಲ್ಲೂ ಪಠ್ಯವಾದ ಹಾಜಬ್ಬ: ಹಾಜಬ್ಬ ಅವರ ಜೀವನ ಕಥೆ ಅಧ್ಯಯನಕ್ಕೆ ಯೋಗ್ಯವಾಗಿದ್ದು, ಇವರ ವಿಚಾರ ಪಠ್ಯವಾಗಿ ಬಂದಿದೆ. ಅಕ್ಷರ ಓದಲು ಬಾರದ ಅನಕ್ಷರಸ್ಥ ಮಾಡಿದ ಸಾಧನೆ ಮಂಗಳೂರು ವಿಶ್ವವಿದ್ಯಾನಿಲಯದ ಪದವಿಯಲ್ಲಿ ಪಠ್ಯವಾಗಿದೆ. ಎಂಟನೇ ತರಗತಿಯ ತುಳು ಪಠ್ಯವಾಗಿದೆ. ಕೇರಳದ ಕನ್ನಡ ಭಾಷೆಯಲ್ಲಿ ಹಾಜಬ್ಬ ಅವರ ವಿಚಾರ ಪಠ್ಯವಾಗಿದೆ.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳ ವಿಚಾರಣೆಯಲ್ಲಿ : ಹರೇಕಳ ಹಾಜಬ್ಬ ನಾಲ್ಕು ಬಾರಿ ವಿದೇಶಕ್ಕೆ ಹೋಗಿದ್ದಾರೆ. ನಾಲ್ಕು ವಿವಿಧ ದೇಶಗಳಲ್ಲಿ ಅವರಿಗೆ ವಿವಿಧ ಸಂಘಸಂಸ್ಥೆಗಳು ನೀಡಿದ ಪ್ರಶಸ್ತಿಯನ್ನು ಸ್ವೀಕರಿಸಲು ಅವರು ವಿದೇಶಕ್ಕೆ ತೆರಳಿದ್ದಾರೆ. ಎಲ್ಲಾ ವ್ಯವಸ್ಥೆ ಗಳನ್ನು ಸಂಘಸಂಸ್ಥೆಗಳೆ ಮಾಡಿದ್ದ ಕಾರಣ ಅಲ್ಲಿಗೆ ತೆರಳಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಆದರೆ ಅಬುದಾಬಿ ವಿಮಾನ ನಿಲ್ದಾಣದಲ್ಲಿ ಹಾಜಬ್ಬ ಅವರನ್ನು ಅಧಿಕಾರಿಗಳು ವಿಚಾರಣೆ ಆರಂಭಿಸಿದ್ದರು . ಅಕ್ಷರವು ಗೊತ್ತಿಲ್ಲದ ಹಾಜಬ್ಬ ಅವರಿಗೆ ತನ್ನನ್ನು ಪರಿಚಯಿಸಲು ಭಾಷಾ ಸಮಸ್ಯೆ ಎದುರಾಗಿತ್ತು. ಹಾಜಬ್ಬ ಅವರ ಇಸ್ತ್ರಿ ಇಲ್ಲದ ಅಂಗಿ, ಲುಂಗಿಯನ್ನು ನೋಡಿದ ಅಧಿಕಾರಿ ಇವರನ್ನು ವಿಮಾನ ನಿಲ್ದಾಣದಿಂದ ಹೊರಬಿಡಲಿಲ್ಲ. ಕೊನೆಗೆ ಹಾಜಬ್ಬ ಅವರು ತನ್ನ ಬಗ್ಗೆ ಇಂಗ್ಲೀಷ್ ಪುಸ್ತಕವೊಂದರಲ್ಲಿ ಬರೆದ ಲೇಖನವನ್ನು ಮತ್ತು ತನಗೆ ಪ್ರಶಸ್ತಿ ಸ್ವೀಕರಿಸಲು ಬಂದ ಕಾಗದ ಪತ್ರಗಳನ್ನು ತೋರಿಸಿದ ಬಳಿಕ ಇವರನ್ನು ಬಿಟ್ಟರಂತೆ.
ಮನೆ ಕೊಡುಗೆ : ಮನೆಯು ಸರಿಯಿಲ್ಲದೆ ಸಣ್ಣ ಗೂಡಿನಲ್ಲಿ ವಾಸವಿದ್ದ ಹಾಜಬ್ಬ ಅವರು ಶಾಲೆಯ ಬಗ್ಗೆ ಚಿಂತಿಸಿದರೆ ಹೊರತು, ತನ್ನ ಮನೆ ಕಡೆ ಗಮನಕೊಡಲು ಸಾಧ್ಯವಾಗಿಲ್ಲ. ಈ ಬಗ್ಗೆ ಚಿಂತೆ ಅವರಲ್ಲಿದ್ದರು ಅದನ್ನು ಎಲ್ಲಿಯೂ ಹೇಳಿರಲಿಲ್ಲ. ತಮಗೆ ಬಂದ ಪ್ರಶಸ್ತಿ ಹಣವನ್ನು ಶಾಲೆಗೆ ನೀಡಿದ್ದರು. ಆದರೆ ಮಂಗಳೂರಿನ ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ಅಧ್ಯಕ್ಷ ಆಲ್ಬನ್ ಮಿನೇಜಸ್ ಅವರು ತಮ್ಮ ಸಂಸ್ಥೆ ಮೂಲಕ ಅವರಿಗೆ 15 ಲಕ್ಷ ರೂ. ವೆಚ್ಚದಲ್ಲಿ ಮನೆಯನ್ನು ಕಟ್ಟಿಕೊಟ್ಟರು.
ಹಾಜಬ್ಬ ಅವರಿಗೆ ಶಾಲೆಯನ್ನು ಇನ್ನಷ್ಟು ಅಭಿವೃದ್ಧಿ ಮಾಡಬೇಕೆಂಬ ಕನಸಿದೆ. ಶಾಲೆಗೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿರುವ ಆತಂಕವಿದೆ. ಇದಕ್ಕಾಗಿ ಚಿಂತಿತರಾಗಿರುವ ಹಾಜಬ್ಬ ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಇಂತಹ ಮಹಾನ್ ಸಮಾಜ ಸೇವಕನಿಗೆ ಪದ್ಮಶ್ರೀ ಪುರಸ್ಕಾರ ದೊರೆತಿರುವುದು ಕನ್ನಡನಾಡಿಗೆ ಹೆಮ್ಮೆ.