ಸುಬ್ರಹ್ಮಣ್ಯ: ವಿಶ್ವ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ದೀಪಾವಳಿಯ ಬಲಿಪಾಡ್ಯಮಿಯಂದು ಅಂದರೆ ಇಂದು ಶ್ರೀ ದೇವರ ಹೊರಾಂಗಣ ಪ್ರವೇಶವಾಗುವ ಮೂಲಕ ಹೊರಾಂಗಣ ಉತ್ಸವ ಆರಂಭವಾಗಲಿದೆ.
ಬಲಿಪಾಡ್ಯಮಿ ದಿನದಂದು ದೀಪಾವಳಿ ಪ್ರಯುಕ್ತ ಪಾಲಕಿ ಮತ್ತು ಬಂಡಿ ಉತ್ಸವಗೂಳು ನೆರವೇರುತ್ತದೆ. ಈ ಮೂಲಕ ಕುಕ್ಕೆ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರ ಹೊರಾಂಗಣ ವರ್ಷಾವಧಿ ಉತ್ಸವಗಳು ಆರಂಭವಾಗುತ್ತದೆ. ದೀಪಾವಳಿಯ ಮುಂದಿನ ದಿನಗಳಲ್ಲಿ ದೇವಳದಲ್ಲಿ ಶ್ರೀ ದೇವರ ಪಾಲಕಿ ಉತ್ಸವ, ಭಂಡಿ ಉತ್ಸವ ಹಾಗೂ ಮಂಟಪೋತ್ಸವ ಸೇವೆಗಳು ನಡೆಯುತ್ತದೆ.
ಮುಂದೆ ಬರುವ ಲಕ್ಷ ದೀಪೋತ್ಸವದ ನಂತರ ಕ್ಷೇತ್ರದ ರಥಬೀದಿಯಲ್ಲಿ ರಥೋತ್ಸವಗಳು ನಡೆಯಲಿದೆ. ನಾಡಿನ ಉಳಿದ ದೇವಾಲಯಗಳಲ್ಲಿ ಪತ್ತನಾಜೆಯಂದು ಕೊನೆಯ ಉತ್ಸವವಾಗಿ ಉತ್ಸವ ಮೂರ್ತಿಯು ಗರ್ಭಗುಡಿ ಪ್ರವೇಶಿಸುವುದರೊಂದಿಗೆ ಉತ್ಸವಗಳು ಕೊನೆಯಾಗುತ್ತದೆ. ಆದರೆ ಕುಕ್ಕೆಯಲ್ಲಿ ಮಾತ್ರ ಜೇಷ್ಠ ಶುದ್ಧ ಷಷ್ಠಿಯಂದು ಕೊನೆಯ ಉತ್ಸವವು ನಡೆದು, ದೀಪಾವಳಿಯ ಅಮವಾಸ್ಯೆಯಂದು ಉತ್ಸವ ಆರಂಭವಾಗುತ್ತದೆ.
ಇದನ್ನೂ ಓದಿ: ಘಾಟಿ ಸುಬ್ರಹ್ಮಣ್ಯ ಹುಂಡಿ ಎಣಿಕೆ: 93ಲಕ್ಷ ರೂಪಾಯಿ ಸಂಗ್ರಹ
ಕಾರ್ತಿಕ ಮಾಸದ ಪ್ರಥಮ ದಿನವಾದ ಬುಧವಾರ (ಅ.26) ರಂದು ನಾಡಿನ ಎಲ್ಲ ದೇವಾಲಯಗಳಲ್ಲೂ ಉತ್ಸವಗಳು ಆರಂಭವಾಗುತ್ತದೆ. ಅದೇ ರೀತಿ ಕುಕ್ಕೆಯಲ್ಲೂ ಹೊರಾಂಗಣ ಉತ್ಸವಗಳು ಆರಂಭಗೊಳ್ಳುತ್ತದೆ. ದೇವಳದ ಹೊರಾಂಗಣದಲ್ಲಿ ಆನೆ, ಬಿರುದಾವಳಿ, ಮಂಗಳವಾದ್ಯಗಳ ನಿನಾದದೊಂದಿಗೆ ಶ್ರೀ ಸುಬ್ರಹ್ಮಣ್ಯ ದೇವರ ಉತ್ಸವಾಧಿಗಳು ನೆರವೇರುತ್ತದೆ. ಈ ಸಮಯದಲ್ಲಿ ಸಹಸ್ರಾರು ಭಕ್ತಾಧಿಗಳು ಶ್ರೀ ದೇವರ ಉತ್ಸವ ವೀಕ್ಷಿಸಿ ಕೃತಾರ್ಥರಾಗುತ್ತಾರೆ.
ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ 'ಸರ್ಪ ಸಂಸ್ಕಾರ ಸೇವಾ' ದರ ಹೆಚ್ಚಳ
ಈ ಮೊದಲು ದೇವಳದಲ್ಲಿ ಪೂರ್ವಶಿಷ್ಠ ಸಂಪ್ರದಾಯದ ಪ್ರಕಾರ ಗೋಪೂಜೆ ಮತ್ತು ಲಕ್ಷ್ಮೀ ಪೂಜೆಗಳು ನೆರವೇರುತ್ತದೆ. ನಿನ್ನೆ ಸೂರ್ಯಗ್ರಹಣವಿದ್ದ ಹಿನ್ನೆಲೆ ದೇಗುಲದಲ್ಲಿ ಎಲ್ಲ ಸೇವೆಗಳನ್ನು ರದ್ದು ಮಾಡಲಾಗಿತ್ತು. ಮಾತ್ರವಲ್ಲದೇ, ದೀಪಾವಳಿ ರಜೆಯ ಕಾರಣದಿಂದಾಗಿ ಇಂದಿನಿಂದ ಅತ್ಯಧಿಕ ಜನರು ಸೇರುವ ನಿರೀಕ್ಷೆ ಇದೆ.