ಮಂಗಳೂರು: ಕೋವಿಡ್ ಸೋಂಕು ಅಧಿಕಗೊಳ್ಳುತ್ತಿರುವುದರಿಂದ ನಗರದ ಖಾಸಗಿ ಆಸ್ಪತ್ರೆಗಳನ್ನು ಕೋವಿಡ್ ಆಸ್ಪತ್ರೆಯಾಗಿ ಮಾರ್ಪಾಡು ಮಾಡಲಾಗುತ್ತಿದೆ. ಇಲ್ಲಿ ಒಂದು ಬ್ಲಾಕ್ನ್ನು ಕೋವಿಡ್ ವಿಭಾಗವಾಗಿ ಮಾಡಲಾಗುತ್ತಿದೆ. ಇದರಿಂದ ಇತರ ರೋಗಿಗಳು ಆತಂಕದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದರು.
ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಇದಕ್ಕಿಂತ ಜಿಲ್ಲಾಡಳಿತ ನಗರದ ಕೆಲವೊಂದು ಖಾಸಗಿ ಆಸ್ಪತ್ರೆಗಳನ್ನು ಜಿಲ್ಲಾಡಳಿದ ವಶಕ್ಕೆ ಪಡೆದು ಕೋವಿಡ್ ಆಸ್ಪತ್ರೆಯಾಗಿ ಮಾರ್ಪಾಡು ಮಾಡಿದರೆ ಉತ್ತಮ. ವೆನ್ಲಾಕ್ ಆಸ್ಪತ್ರೆಯು ಹಿಂದಿನಂತೆ ಕಾರ್ಯ ನಿರ್ವಹಿಸಿದಲ್ಲಿ ಸರ್ಕಾರಿ ಆಸ್ಪತ್ರೆಗಳಿಲ್ಲದೆ ಜನರು ಪರದಾಡುವುದು ತಪ್ಪುತ್ತದೆ. ಇದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಕಾರ್ಯಗತಗೊಳಿಸಲಿ ಎಂದು ಹೇಳಿದರು.
ಇನ್ನು ಕಳೆದ 20 ದಿನಗಳಲ್ಲಿ ಹತ್ತು ರೂ. ಗಿಂತಲೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದೆ. ಬಿಜೆಪಿ ಕಾರ್ಯಕರ್ತರು ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಪೆಟ್ರೋಲ್ ಬೆಲೆ ಇಳಿಸಲಾಗುತ್ತದೆ ಎಂದು ಚುನಾವಣಾ ಪೂರ್ವದಲ್ಲಿ ಹೇಳುತ್ತಿದ್ದರು. ಆದರೆ ಈಗ ಡೀಸೆಲ್ ಗಿಂತ ಕಡಿಮೆ ಬೆಲೆಯಲ್ಲಿ ಪೆಟ್ರೋಲ್ ದೊರಕುತ್ತಿದೆ. ಇದರಿಂದ ಜನರಿಗೆ ಹೊರೆಯಾಗುತ್ತಿದೆ ಎಂದು ಹರೀಶ್ ಕುಮಾರ್ ಹೇಳಿದರು.