ಮಂಗಳೂರು: ಕೊರೊನಾ ಸೋಂಕಿನ ಭೀತಿ ನಾಗರ ಪಂಚಮಿಗೂ ತಟ್ಟಿದ್ದು, ನಗರದ ಪ್ರಸಿದ್ಧ ಕುಡುಪು ಶ್ರೀಕ್ಷೇತ್ರಕ್ಕೆ ನಾಗರ ಪಂಚಮಿಯಂದು ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಜು.25 ರಂದು ನಾಡಿನಾದ್ಯಂತ ನಾಗರಪಂಚಮಿ ಹಬ್ಬ ಆಚರಣೆ ನಡೆಯಲಿದ್ದು, ಮಂಗಳೂರಿನ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನಕ್ಕೆ ಭಕ್ತಾದಿಗಳ ಪ್ರವೇಶ ನಿರ್ಬಂಧಿಸಲಾಗಿದೆ. ಪ್ರತೀ ವರ್ಷವೂ ನಾಗರ ಪಂಚಮಿಯಂದು ಶ್ರೀಕ್ಷೇತ್ರ ಕುಡುಪುವಿಗೆ ಲಕ್ಷಾಂತರ ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಿದ್ದರು. ಆದರೀಗ ಕೊರೊನಾ ಸೋಂಕು ಹರಡದಂತೆ ತಡೆಗಟ್ಟುವ ಹಿನ್ನೆಲೆಯಲ್ಲಿ ಹಾಗೂ ಆಗಮಿಸುವ ಭಕ್ತಾದಿಗಳಿಂದ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಕಷ್ಟಕರವಾಗುವುದರಿಂದ ಮುಂಜಾಗ್ರತಾ ಕ್ರಮವಾಗಿ ನಾಗರ ಪಂಚಮಿಯಂದು ಭಕ್ತಾದಿಗಳಿಗೆ ದೇಗುಲದ ಆವರಣ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ನಾಗರ ಪಂಚಮಿಯ ದಿನದಂದು ಯಾವುದೇ ಸೇವೆಗಳು, ಸೇವಾಪ್ರಸಾದ, ತೀರ್ಥ ಪ್ರಸಾದ ಮತ್ತು ಅನ್ನ ಸಂತರ್ಪಣೆಗಳು ಇರುವುದಿಲ್ಲ. ಅದೇ ರೀತಿ ನಾಗರ ಕಲ್ಲಿಗೆ ಹಾಲು, ಸೀಯಾಳಾಭಿಷೇಕ, ನಾಗ ತಂಬಿಲ, ಪಂಚಾಮೃತ, ಆಶ್ಲೇಷ ಬಲಿ ಮೊದಲಾದ ಯಾವುದೇ ಸೇವೆಗಳು ಇರುವುದಿಲ್ಲ ಎಂದು ಕುಡುಪು ಶ್ರೀ ಅನಂತ ಪದ್ಮನಾಭ ದೇವಳದ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.