ಮಂಗಳೂರು (ದಕ್ಷಿಣ ಕನ್ನಡ): ದ.ಕ ಹಾಗೂ ಉಡುಪಿ ಜಿಲ್ಲೆಗಳ ನಡುವೆ ಕೆಲಸದ ನಿಮಿತ್ತ ಓಡಾಡುವರಿಗೆ ಕೆಲಸ ಮಾಡುವ ಸಂಸ್ಥೆಯ ಅಧಿಕೃತ ಗುರುತಿನ ಪತ್ರ ಹಾಗೂ ಗುರುತಿನ ಚೀಟಿಯನ್ನು ಅನುಮತಿಸಲಾಗಿದೆ. ಆದ್ದರಿಂದ ದ.ಕ. ಹಾಗೂ ಉಡುಪಿ ಮಧ್ಯೆ ಪ್ರಯಾಣಕ್ಕೆ ಯಾವುದೇ ಅಂತರ್ ಜಿಲ್ಲಾ ಪಾಸ್ಗಳ ಅಗತ್ಯವಿಲ್ಲ ಎಂದು ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಪ್ರಕಟಣೆಯಲ್ಲಿ ಆದೇಶಿಸಿದ್ದಾರೆ.
ಕೇಂದ್ರ ಗೃಹ ಸಚಿವಾಲಯ ಮೇ 4ರಿಂದ ಮತ್ತೆರಡು ವಾರಗಳವರೆಗೆ ಲಾಕ್ಡೌನ್ ವಿಸ್ತರಿಸಿದ್ದು, ಈ ಕುರಿತು ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಆದ್ದರಿಂದ ಅಂತರ್ ಜಿಲ್ಲೆಗಳ ನಡುವೆ ವ್ಯಕ್ತಿಗಳು ಹಾಗೂ ವಾಹನಗಳ ಸಂಚಾರಕ್ಕೆ ಹೊಸ ನೀತಿ ಜಾರಿಗೊಳಿಸಿದೆ. ಆದ್ದರಿಂದ ಬೆಂಗಳೂರು ಗ್ರಾಮೀಣ, ಬೆಂಗಳೂರು ನಗರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ತುಮಕೂರು ಜಿಲ್ಲೆಗಳನ್ನು ಒಂದು ಘಟಕವಾಗಿ ಪರಿಗಣಿಸಲಾಗಿದೆ.
ಅದೇ ರೀತಿ ದ.ಕ ಹಾಗೂ ಉಡುಪಿ ಜಿಲ್ಲೆಗಳನ್ನು ಒಂದು ಘಟಕವಾಗಿ ಪರಿಗಣಿಸಲಾಗಿದೆ. ಈ ಎರಡು ಘಟಕಗಳಲ್ಲಿ ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಆದ್ದರಿಂದ ಈ ಎರಡು ಘಟಕಗಳಲ್ಲಿ ಸಂಚಾರಕ್ಕೆ ಯಾವುದೇ ಅಂತರ್ ಜಿಲ್ಲಾ ಪಾಸ್ಗಳ ಅಗತ್ಯವಿಲ್ಲ ಎಂದು ಆದೇಶಿಸಲಾಗಿದೆ.
ಆದರೆ ಸಂಜೆ 7ರಿಂದ ಬೆಳಗ್ಗೆ 7ರ ನಡುವೆ ಸೆಕ್ಷನ್ ಜಾರಿಯಲ್ಲಿದ್ದು, ಕಟ್ಟುನಿಟ್ಟಿನ ಲಾಕ್ಡೌನ್ ಜಾರಿಯಲ್ಲಿರುತ್ತದೆ. ಪರಿಣಾಮ ಈ ಸಮಯದಲ್ಲಿ ಅಂತರ್ ಜಿಲ್ಲಾ ಪಾಸ್ಗಳ ಅವಶ್ಯಕತೆ ಇದೆ. ಆದ್ದರಿಂದ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರು ಸಂಬಂಧಪಟ್ಟ ಜಿಲ್ಲಾಧಿಕಾರಿ, ಪೊಲೀಸ್ ಉಪ ಆಯುಕ್ತರಿಂದ ಪಾಸ್ಗಳನ್ನು ಪಡೆಯಬಹುದು ಎಂದು ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್ ಆದೇಶಿಸಿದ್ದಾರೆ.