ಮಂಗಳೂರು: ನವರಾತ್ರಿ ಬಂತೆಂದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಲಿ ವೇಷ ಕುಣಿತ ಹೆಚ್ಚು ಗಮನ ಸೆಳೆಯುತ್ತದೆ. 9 ದಿನಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯ ಮೂಲೆ ಮೂಲೆಯಲ್ಲೂ ಹುಲಿ ವೇಷದ ನರ್ತನಗಳು ಹಬ್ಬಕ್ಕೆ ಮೆರುಗು ನೀಡುತ್ತದೆ. ನವರಾತ್ರಿ ಹಬ್ಬ ಆಚರಣೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಿಭಿನ್ನವಾಗಿರುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನವರಾತ್ರಿ ಎಂದರೆ ಹುಲಿ ವೇಷ ಸೇರಿದಂತೆ ನಾನಾ ವೇಷಗಳ ಹಬ್ಬವೇ ಕಾಣಿಸುತ್ತದೆ. ಇದರಲ್ಲಿ ಹುಲಿ ವೇಷ ಕುಣಿತ ಭಾರಿ ಪ್ರಸಿದ್ಧಿ ಪಡೆದುಕೊಂಡಿದೆ.
![navarathri-festival-tiger-dance-special-in-managaluru](https://etvbharatimages.akamaized.net/etvbharat/prod-images/21-10-2023/19825709_news-3.png)
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನವರಾತ್ರಿಯನ್ನು ತುಳು ಭಾಷೆಯಲ್ಲಿ 'ಮಾರ್ನೆಮಿ' ಎಂದು ಕರೆಯುತ್ತಾರೆ. ಮಾರ್ನೆಮಿಯಲ್ಲಿ ಜಿಲ್ಲೆಯ ಯಾವ ಬೀದಿ ನೋಡಿದರೂ ಅಲ್ಲಿ ವೇಷಗಳು ಕಾಣಸಿಗುತ್ತದೆ. ಇವುಗಳಲ್ಲಿ ಭಾರಿ ಆಕರ್ಷಣೆ ಇರುವುದು ಹುಲಿ ವೇಷಕ್ಕೆ. ಹುಲಿ ವೇಷ ಕುಣಿತ ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರನ್ನೂ ಆಕರ್ಷಿಸುತ್ತಿರುತ್ತದೆ.
9 ದಿನಗಳ ಕಾಲ ಜನರಿಗೆ ಮನೋರಂಜನೆ: ಜಿಲ್ಲೆಯಲ್ಲಿ ನೂರಾರು ಹುಲಿ ವೇಷದ ತಂಡಗಳಿವೆ. ಹುಲಿ ವೇಷದ ತಂಡದಲ್ಲಿ 15ಕ್ಕೂ ಅಧಿಕ ಹುಲಿವೇಷಧಾರಿಗಳು ಸೇರಿದಂತೆ 60 ಮಂದಿ ಸದಸ್ಯರಿರುತ್ತಾರೆ. ಈ ಹುಲಿ ವೇಷ ತಂಡಗಳನ್ನು ಪ್ರಭಾವಿ ವ್ಯಕ್ತಿಯೊಬ್ಬರು ನಡೆಸುತ್ತಾರೆ. ತಂಡದಲ್ಲಿರುವ ಸದಸ್ಯರು ನವರಾತ್ರಿಗೆ ಹುಲಿ ವೇಷ ಹಾಕಿ 9 ದಿನಗಳ ಕಾಲ ಜಿಲ್ಲೆಯ ಜನರಿಗೆ ಮನೋರಂಜನೆ ನೀಡುತ್ತಾರೆ.
![navarathri-festival-tiger-dance-special-in-managaluru](https://etvbharatimages.akamaized.net/etvbharat/prod-images/21-10-2023/19825709_news-2.png)
ಹುಲಿ ವೇಷ ಹಾಕುವ ಹಿಂದಿದೆ ಧಾರ್ಮಿಕ ನಂಬಿಕೆ: ನವರಾತ್ರಿ ಮೊದಲ ದಿನ ಬಣ್ಣ ಹಚ್ಚುವ ವೇಷಧಾರಿಗಳು ನವರಾತ್ರಿ ಮುಗಿಯುವವರೆಗೂ ಬಣ್ಣ ಕಳಚುವುದಿಲ್ಲ. ಧಾರ್ಮಿಕ ನಂಬಿಕೆಯೊಂದಿಗೆ ಹಾಕುವ ಈ ಬಣ್ಣವನ್ನು ನವರಾತ್ರಿ ಕೊನೆಯ ದಿನದ ಬಳಿಕ ತೆಗೆಯುವುದು ವಾಡಿಕೆ. ಹುಲಿ ವೇಷದ ತಂಡಗಳು ಹುಲಿ ವೇಷವನ್ನು ಮೈಗೆ ಬಳಿದು ತಾಸೆ, ಡೋಲು, ವಾದ್ಯ ನಿನಾದಗಳ ಘರ್ಜನೆಯೊಂದಿಗೆ ಮನೆ ಮನೆಗೆ ಹೋಗಿ ಕುಣಿಯುತ್ತಾರೆ. ನವರಾತ್ರಿ ಆರಂಭದಿಂದ ಕೊನೆಯ ದಿನದವರೆಗೆ ಬೆಳಗ್ಗೆಯಿಂದ ರಾತ್ರಿ 11- 12 ಗಂಟೆಯವರೆಗೆ ಮನೆ ಮನೆಗೆ ಹೋಗಿ ಕುಣಿಯುತ್ತಾರೆ. ಅಬ್ಬರದ ಕುಣಿತವನ್ನು ಪ್ರತಿ ಮನೆಯಲ್ಲಿ ಮಾಡಿ ಮನರಂಜಿಸುವ ತಂಡಗಳು ಆಯಾ ಮನೆಯವರು ನೀಡುವ ಸಂಭಾವನೆ ಪಡೆದುಕೊಂಡು ಹೋಗುತ್ತಾರೆ.
![navarathri-festival-tiger-dance-special-in-managaluru](https://etvbharatimages.akamaized.net/etvbharat/prod-images/21-10-2023/19825709_news-6.png)
ತಾಸೆಯ ಪೆಟ್ಟಿಗೆ ಹೆಜ್ಜೆ ಹಾಕುವ ಮಹಿಳೆಯರು: ಹುಲಿ ವೇಷ ಕುಣಿತದ ಹಿಂದೆ ದೇವಿ ಆರಾಧನೆಯ ಪರಿಕಲ್ಪನೆಯಿದೆ. ಧಾರ್ಮಿಕ ನಂಬಿಕೆ, ಹರಕೆ ಮೊದಲಾದ ಕಾರಣದಿಂದ ತಂಡ ಕುಣಿತ ನಡೆಸುತ್ತದೆ. ಹುಲಿ ವೇಷ ಕುಣಿತ ತಂಡ ಮನೆ ಮನೆಗೆ ಬರುತ್ತಿದ್ದರೆ ಮನೆಯೊಳಗೆ ಅವಿತು ಕುಳಿತುಕೊಳ್ಳುವ ಮಕ್ಕಳು ಒಂದೆಡೆ ಇದ್ದರೆ, ಹುಲಿ ವೇಷದ ತಂಡದೊಂದಿಗೆ ಮನೆಮನೆಗೆ ಹೋಗುವ ಮಕ್ಕಳು ಇದ್ದಾರೆ. ಇನ್ನೊಂದು ವಿಶೇಷತೆಯೆಂದರೆ ಸಣ್ಣ ಮಕ್ಕಳು ಹುಲಿ ವೇಷ ಹಾಕಿ ಮನರಂಜಿಸುತ್ತಾರೆ. ಹುಲಿ ವೇಷಗಳೆಂದರೆ ಅದು ಪುರುಷರು ಹಾಕುವ ಕಲೆ ಎಂದೆ ಬಿಂಬಿತವಾಗಿತ್ತು. ಇತ್ತೀಚೆಗೆ ಹುಲಿ ವೇಷದಲ್ಲಿ ಮಹಿಳೆಯರು ಕಾಣಿಸಿಕೊಳ್ಳುತ್ತಿದ್ದಾರೆ. ಎಲ್ಲ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಮಹಿಳೆಯರು ಹುಲಿ ವೇಷದ ನರ್ತನದಲ್ಲಿ ಹೆಜ್ಜೆ ಹಾಕಿ ಸೈ ಎನಿಸಿದ್ದಾರೆ.
![navarathri-festival-tiger-dance-special-in-managaluru](https://etvbharatimages.akamaized.net/etvbharat/prod-images/21-10-2023/19825709_news-4.png)
ಹುಲಿ ವೇಷ ಕುಣಿತ ಕಾಟಾಚಾರದ ಕುಣಿತವಲ್ಲ. ಹುಲಿಗಳ ವೇಷಧಾರಿಗಳು ಕ್ರಮಬದ್ಧವಾಗಿ ಹೆಜ್ಜೆ ಹಾಕುವುದು, ಆ ಮೂಲಕ ಎಲ್ಲರ ಗಮನ ಸೆಳೆಯುತ್ತದೆ. ನರ್ತನದಲ್ಲಿ ಸೈ ಎನಿಸಿಕೊಂಡ ಹಿರಿಯರಿಗೆ ವಿಶೇಷ ಗೌರವ ಇದೆ. ಹೊಸತಾಗಿ ಹುಲಿವೇಷಧಾರಿಗಳಾಗಿ ಬರುವವರಿಗೆ ತರಬೇತಿ ನೀಡಲಾಗುತ್ತದೆ.
ವೇಷ ಕಳಚುವುದಕ್ಕೂ ಇದೆ ಕ್ರಮ: ಹುಲಿ ವೇಷಗಳ ಜೊತೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರಡಿ ವೇಷ, ವ್ಯಕ್ತಿತ್ವವನ್ನು ಬಿಂಬಿಸುವ ವೇಷಗಳು ಗಮನ ಸೆಳೆಯುತ್ತಿವೆ. ದಶಕಗಳ ಹಿಂದೆ ಕೊರಗ ಸಮುದಾಯವನ್ನು ಬಿಂಬಿಸುವ ಕೊರಗ ವೇಷ (ಮೈಗೆ ಕರಿಬಣ್ಣ ಬಳಿದು), ದೈವಗಳ ವೇಷ ಇದ್ದು, ಅವುಗಳನ್ನು ನಿಷೇಧಿಸಲಾಗಿದೆ. ನವರಾತ್ರಿ ಮೊದಲ ದಿನ ದೇವರ ಮುಂದೆ ಪ್ರಾರ್ಥಿಸಿ ಹಾಕಲಾಗುವ ವೇಷವನ್ನು ನವರಾತ್ರಿ ಕೊನೆಯ ದಿನದವರೆಗೆ ಉಳಿಸಿಕೊಳ್ಳಲಾಗುತ್ತದೆ. ಧಾರ್ಮಿಕ ನಂಬಿಕೆಯೊಂದಿಗೆ ಹಾಕಲಾಗುವ ವೇಷಗಳನ್ನು ನವರಾತ್ರಿ ಕಳೆದು ದೇವಾಲಯಗಳಲ್ಲಿ ತೀರ್ಥ ಪಡೆದು ಆ ಬಳಿಕ ಜಳಕ ಮಾಡಿ ತೆಗೆಯಲಾಗುತ್ತದೆ. ಇದು ಹಿಂದಿನಿಂದ ಬಂದ ಕ್ರಮವಾಗಿದೆ.
![navarathri-festival-tiger-dance-special-in-managaluru](https://etvbharatimages.akamaized.net/etvbharat/prod-images/21-10-2023/19825709_news-5.png)
ಹುಲಿ ವೇಷದ ಬಗ್ಗೆ ಹಿರಿಯ ತುಳು ವಿದ್ವಾಂಸ ಕೆ ಕೆ ಪೇಜಾವರ ಹೇಳಿದ್ದು ಹೀಗೆ, "ದಕ್ಷಿಣ ಕನ್ನಡ ಜಿಲ್ಲೆ ಈ ಹಿಂದೆ ಕಾಡು ಪ್ರದೇಶವಿದ್ದ ಜಾಗವಾಗಿತ್ತು. ಹುಲಿಯನ್ನು ತುಳು ಭಾಷೆಯಲ್ಲಿ 'ಪಿಲಿ' ಎನ್ನುತ್ತಾರೆ. ಇಲ್ಲಿ ಹುಲಿಗಳು ಇದ್ದ ಕಾರಣಕ್ಕೆ ಪಿಲಿಕುಳ, ಪಿಲಿಯೂರು, ಪಿಲಿಮಂಜಲ್ ಎಂಬ ಊರುಗಳು ಇದೆ. ಬ್ರಿಟಿಷರ ಕಾಲದಲ್ಲಿ ಹುಲಿ ಬೇಟೆ ಸಾಮಾನ್ಯವಾಗಿತ್ತು. ಆಗ ಒಂದು ಹುಲಿ ಬೇಟೆಯಾಡಿದವನಿಗೆ ಒಂದು ಮದುವೆ ಮಾಡುವುದು ಎಂದು ಇತ್ತು. ಜನರು ಆರೋಗ್ಯ ಸಮಸ್ಯೆ ಎದುರಾದಾಗ ನವರಾತ್ರಿಗೆ ವೇಷ ಧರಿಸುವ ಹರಕೆಗಳನ್ನು ಹೇಳುತ್ತಿದ್ದರು. ಈ ರೀತಿಯಾಗಿ ನವರಾತ್ರಿಗೆ ಹುಲಿವೇಷ ಧರಿಸುವ ಪದ್ಧತಿ ಬಂದಿದೆ. ಇದರ ಜೊತೆಗೆ ಬೇರೆ ಬೇರೆ ವೇಷ ಧರಿಸುವ ಹರಕೆಗಳನ್ನು ಹೇಳುತ್ತಿದ್ದರು. ಆದರೆ, ಈಗ ಅದು ಹುಲಿ ವೇಷಕ್ಕೆ ಸೀಮಿತವಾಗಿ ಬಿಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಲಿವೇಷಗಳ ಸ್ಪರ್ಧೆಯಿಂದ ಸಾಂಪ್ರದಾಯಿಕತೆ ಹೆಚ್ಚಾಗಿದೆ" ಎನ್ನುತ್ತಾರೆ.
ಹುಲಿ ವೇಷದ ಕುಣಿತ ಸ್ಪರ್ಧೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಿದ್ಧವಾದ ಹುಲಿ ವೇಷವನ್ನು ಇತ್ತೀಚೆಗೆ ಸ್ಪರ್ಧೆಯ ಮೂಲಕ ಜನರು ಕಣ್ತುಂಬಿಕೊಳ್ಳುತ್ತಿದ್ದಾರೆ. ಮಂಗಳೂರಿನಲ್ಲಿ ಹುಲಿ ವೇಷ ಸ್ಪರ್ಧೆ 1996ರಲ್ಲಿ ಆರಂಭವಾಗಿತ್ತು. ಕಾಂಗ್ರೆಸ್ ಮುಖಂಡ ಮಿಥುನ್ ರೈ ನೇತೃತ್ವದಲ್ಲಿ ಪಿಲಿನಲಿಕೆ ಪಂಥ ಎಂದು ಹಲವು ವರ್ಷಗಳಿಂದ ನಡೆಯುತ್ತಿದ್ದರೆ, ಕಳೆದ ವರ್ಷದಿಂದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ 'ಕುಡ್ಲದ ಪಿಲಿ ಪರ್ಬ' ಎಂಬ ಸ್ಪರ್ಧೆ ನಡೆಯುತ್ತಿದೆ. ಇನ್ನು ಪುತ್ತೂರು, ಉಡುಪಿ, ಕೇರಳದ ಮಂಜೇಶ್ವರ ಮೊದಲಾದ ಭಾಗಗಳಲ್ಲಿಯೂ ಹುಲಿ ವೇಷದ ಕುಣಿತ ಸ್ಪರ್ಧೆ ನಡೆಯುತ್ತಿದೆ.
![navarathri-festival-tiger-dance-special-in-managaluru](https://etvbharatimages.akamaized.net/etvbharat/prod-images/21-10-2023/19825709_news-1.png)
ಈ ಸ್ಪರ್ಧೆಗಳಲ್ಲಿ ಹತ್ತಾರು ಹುಲಿವೇಷದ ತಂಡಗಳು ಭಾಗವಹಿಸಿ ಹುಲಿ ವೇಷದ ನರ್ತನ ಮಾಡುತ್ತವೆ. ತಾಸೆ, ಡೋಲು, ವಾದ್ಯ ನಿನಾದಗಳೊಂದಿಗೆ ಹುಲಿ ವೇಷದ ಕುಣಿತದ ಘರ್ಜನೆ ಎಲ್ಲರನ್ನು ಆಕರ್ಷಿಸುತ್ತಿದೆ. ಈ ಸ್ಪರ್ಧೆಗಳಲ್ಲಿ ವಿಶೇಷ ಮರಿ ಹುಲಿ ಪ್ರಶಸ್ತಿ, ಕಪ್ಪು ಹುಲಿ, ತಾಸೆ ತಂಡ, ಮುಡಿ ಬಿಸಾಡುವುದು, ಬಣ್ಣಗಾರಿಕೆ ವಿಭಾಗದಲ್ಲಿ ಸ್ಪರ್ಧೆಗಳು ಜರುಗುತ್ತವೆ. ನಗರದಲ್ಲಿ ಹುಲಿವೇಷ ಕುಣಿತ ಪ್ರತಿಷ್ಠೆಯಾಗಿದೆ.
ಹಿಂದೆಲ್ಲ ಹುಲಿವೇಷ ತಂಡಗಳು ಎಲ್ಲ ಮನೆಗೆ ತೆರಳಿ ಕುಣಿದು ಅವರು ಪ್ರೀತ್ಯಾರ್ಥ ನೀಡುವ ಸಂಭಾವನೆಯನ್ನು ಪಡೆಯುತ್ತಿದ್ದರೆ, ಇತ್ತೀಚೆಗೆ ಈ ರೀತಿಯ ವ್ಯವಸ್ಥೆ ತೀರಾ ಕಡಿಮೆಯಾಗಿದೆ. ಈಚೆಗಿನ ವರ್ಷಗಳಲ್ಲಿ ಕೆಲವು ಹುಲಿ ವೇಷದ ತಂಡಗಳು ಆಯ್ದ ಮನೆಗೆ ಮಾತ್ರ ತೆರಳಿ ಹುಲಿ ವೇಷದ ನರ್ತನ ಮಾಡುತ್ತವೆ. ಈ ಮೂಲಕ ಪ್ರಭಾವಿ ತಂಡಗಳ ನರ್ತನ ನೋಡುವ ಭಾಗ್ಯ ಹೆಚ್ಚಿನವರಿಗೆ ದೊರೆಯುತ್ತಿಲ್ಲ ಎಂಬ ನಿರಾಶೆ ಕೂಡ ಹಲವರಲ್ಲಿ ಮನೆ ಮಾಡಿದೆ.
ಇದನ್ನೂ ಓದಿ : 30 ಲಕ್ಷ ವಿದ್ಯುತ್ ದೀಪಗಳಿಂದ ಮಂಗಳೂರಿಗೆ ಸಿಂಗಾರ- ವಿಡಿಯೋ