ಮಂಗಳೂರು: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ಅಭೂತಪೂರ್ವ ಗೆಲುವು ಸಾಧಿಸಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನವನ್ನು ಗೆಲ್ಲುವುದರ ಮುನ್ಸೂಚನೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಗೆಲುವಿನಲ್ಲಿ ಇಡೀ ಬಿಜೆಪಿ ತಂಡದ ಪರಿಶ್ರಮ ಅಡಗಿದೆ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಬಿಜೆಪಿಗೆ ಗೆಲುವು ಕಟ್ಟಿಟ್ಟ ಬುತ್ತಿ. ಮುಂದಿನ ಚುನಾವಣೆಗಳಲ್ಲಿ ಇನ್ನಷ್ಟು ಹುರುಪಿನಿಂದ ಕೆಲಸ ಮಾಡಿ ಗೆಲುವು ಸಾಧಿಸಲಿದ್ದೇವೆ. ಕಳೆದ ಬಾರಿ ಹಿನ್ನಡೆಯಾಗಿದ್ದ ಕನಕಪುರ, ಮಂಡ್ಯ, ಹಾಸನ, ಕೋಲಾರ ಸೇರಿದಂತೆ ಕೆಲವೆಡೆ ಬಿಜೆಪಿ ಮುನ್ನಡೆ ಸಾಧಿಸಿದ್ದು, ಮುಂದಿನ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ಖಚಿತ ಎಂದರು.
ಕಾಂಗ್ರೆಸ್ ತನ್ನ ಪಾರಂಪರಿಕ ಮತಗಳನ್ನು ಪಡೆಯುವಲ್ಲಿ ವಿಫಲವಾಗಿದೆ. ಗ್ರಾಮ ಪಂಚಾಯತ್ನಲ್ಲಿ ಬಿಜೆಪಿ ಗೆಲುವು ಮುಖ್ಯಮಂತ್ರಿಗಳ ಪರವಾಗಿ, ಕೇಂದ್ರ ಸರ್ಕಾರ ಮಂಡಿಸಿದ ಕೃಷಿ ಮಸೂದೆಗಳನ್ನು ಬೆಂಬಲಿಸಿ ಬಂದಿದೆ ಎಂದರು.
ಎಸ್ಡಿಪಿಐ ಕಾರ್ಯ ಭಯೋತ್ಪಾದನೆಗೆ ಪೂರಕ: ಗೆಲುವಿನ ಹುಮ್ಮಸ್ಸಿನಲ್ಲಿ ಯಾರೂ ಕೂಡ ಮೈಮರೆಯಬಾರದು. ಕಾರ್ಯಕರ್ತರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಪಕ್ಷದ ನಾಯಕತ್ವಕ್ಕೆ ಬೇಕು. ಆದರೆ ನಿನ್ನೆ ಗೆಲುವಿನ ಹುಮ್ಮಸ್ಸಿನಲ್ಲಿ ಎಸ್ ಡಿ ಪಿ ಐ ಕಾರ್ಯಕರ್ತರು ಪಾಕಿಸ್ತಾನ ಪರ ಘೋಷಣೆ ಕೂಗಿದ್ದು ಎಸ್ ಡಿ ಪಿ ಐ ರಾಷ್ಟ್ರ ವಿರೋಧಿ ಎಂಬುದನ್ನು ತೋರಿಸಿದೆ. ಎಸ್ ಡಿ ಪಿ ಐ ಭಯೋತ್ಪಾದನಾ ಸಂಸ್ಥೆ ಅಲ್ಲ ಎಂದು ತಿಳಿದುಕೊಂಡಿದ್ದೆವು. ಆದರೆ ಅದರ ಚಟುವಟಿಕೆ ಭಯೋತ್ಪಾದನೆಗೆ ಪೂರಕವಾಗಿದೆ ಮತ್ತು ರಾಷ್ಟ್ರ ವಿರೋಧಿಯಾಗಿದೆ ಎಂದರು.
ಈ ಸುದ್ದಿಯನ್ನೂ ಓದಿ: ಪಾಕ್ ಪರ ಘೋಷಣೆ ಹಾಕಿದ ವಿಡಿಯೋ ವೈರಲ್: ಎಸ್ಡಿಪಿಐ ಬೆಂಬಲಿಗರ ವಿರುದ್ಧ ಪ್ರಕರಣ
ಎಸ್ ಡಿ ಪಿ ಐ ರಾಷ್ಟ್ರೀಯ ನಾಯಕನನ್ನು ಬಂಧಿಸಿದ ವೇಳೆ ಕಾನೂನು ರೀತಿಯಲ್ಲಿ ಹೋರಾಟ ಮಾಡುವ ಬದಲು ಕಚೇರಿಗೆ ಮುತ್ತಿಗೆ ಹಾಕಿ ಗಲಭೆ ಮಾಡಲು ಯತ್ನಿಸುತ್ತಿದೆ. ಕಾಂಗ್ರೆಸ್ ಒಂದೊಂದು ಬಾರಿ ಒಂದೊಂದು ರೀತಿಯಾಗಿ ಮಾತನಾಡುತ್ತಿದೆ. ಒಂದು ಬಾರಿ ಎಸ್ ಡಿ ಪಿ ಐ ಜೊತೆಗೆ ಸಂಬಂಧವಿಲ್ಲ ಎನ್ನುತ್ತಾ ಮತ್ತೊಮ್ಮೆ ಅದರ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ ಎಂದರು.