ಮಂಗಳೂರು: ಬಿಜೆಪಿಯಲ್ಲಿ ಅಲ್ಲ, ಕಾಂಗ್ರೆಸ್ನಲ್ಲಿ ನಿಜವಾಗಿ ನಾಯಕತ್ವದ ಕೊರತೆಯಿದೆ. ಅದಕ್ಕಾಗಿಯೇ ಸಿದ್ದರಾಮಯ್ಯ ಸಿಎಂ ಆದ ಬಳಿಕ ಅವರು ಸಮರ್ಥ ನಾಯಕ ಅಲ್ಲ ಎಂದು ಅರಿತ ರಾಹುಲ್ ಗಾಂಧಿ, ಸೋನಿಯಾ ಗಾಂಧಿಯವರು ಕುಮಾರಸ್ವಾಮಿಯವರನ್ನು ಕೈ-ಕಾಲು ಹಿಡಿದು ಮುಖ್ಯಮಂತ್ರಿ ಮಾಡಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟಾಂಗ್ ನೀಡಿದ್ದಾರೆ.
ಸಿದ್ದರಾಮಯ್ಯನವರು, ಯಡಿಯೂರಪ್ಪನವರ ಬಳಿಕ ಬಿಜೆಪಿಯಲ್ಲಿ ಸಿಎಂ ಅಭ್ಯರ್ಥಿ ಕೊರತೆಯಿದೆ ಎಂಬ ಮಾತಿಗೆ ಮಂಗಳೂರಿನಲ್ಲಿ ಕಟೀಲ್ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ನಲ್ಲಿ ಸಮರ್ಥ ನಾಯಕರಿಲ್ಲ. ಸಿದ್ದರಾಮಯ್ಯ ಸಮರ್ಥ ನಾಯಕರಲ್ಲ ಎಂಬುದು ಸೋನಿಯಾ ಗಾಂಧಿಯವರ ತೀರ್ಮಾನವಲ್ಲವೇ? ಹಾಗಾಗಿ ಸಿದ್ದರಾಮಯ್ಯನವ್ರು ಮೊದಲಿಗೆ ಅವರ ಪಕ್ಷದ ಸ್ಥಿತಿಗತಿಗಳ ಬಗ್ಗೆ ನೋಡಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: ಯಡಿಯೂರಪ್ಪನವ್ರ ಮೇಲೆ ನನಗೆ ಪ್ರೀತಿ ಇದೆ, ಆದ್ರೆ ಸಿಎಂ ಆಗಿ ಕೆಲಸದಲ್ಲಿ ವಿಫಲರಾಗಿದ್ದಾರೆ: ಸಿದ್ದರಾಮಯ್ಯ
ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ. ನಮ್ಮ ಸರ್ವಸಮ್ಮತಿಯ ನಾಯಕ ಯಡಿಯೂರಪ್ಪನವರು 40-45 ವರ್ಷಗಳ ಸುದೀರ್ಘ ಹೋರಾಟದ ಫಲವಾಗಿ ಇಂದು ಈ ಎತ್ತರದ ಸ್ಥಾನಕ್ಕೆ ಬಂದಿದ್ದಾರೆ. ಯಡಿಯೂರಪ್ಪನವರು ಪಕ್ಷಾಂತರ ಮಾಡಿ ಯಾರದ್ದೋ ಕಾಲು ಹಿಡಿದು ಸಿಎಂ ಆದವರಲ್ಲ. ಸಿದ್ದರಾಮಯ್ಯನವರು ಮಾತನಾಡುವ ಮೊದಲು ಅವರು ಎಲ್ಲಿದ್ದರು, ಅವರ ಗುರುಗಳು ಯಾರು ಎಂಬುದನ್ನು ಯೋಚನೆ ಮಾಡಲಿ. ಅವರು ಏನೆಲ್ಲಾ ಕಾಂಗ್ರೆಸ್ಗೆ ಬೈದು, ಮತ್ತೆ ಕಾಂಗ್ರೆಸ್ಗೆ ಬಂದು ಮುಖ್ಯಮಂತ್ರಿ ಸ್ಥಾನ ಹಿಡಿದವರೆಂದು ಜಗತ್ತಿಗೆ ತಿಳಿದಿದೆ ಎಂದು ಹೇಳಿದರು.