ಮಂಗಳೂರು: ಭಾರತ ಕೃಷಿ ಪ್ರಧಾನ ರಾಷ್ಟ್ರ. ಆದರೆ ಈಗಿನ ಆಧುನಿಕ ಜೀವನದ ಭರಾಟೆಯಿಂದ ಯುವಕರೆಲ್ಲಾ ನಗರ ಜೀವನದತ್ತ ಆಸಕ್ತಿಯುತರಾಗಿ ಹಳ್ಳಿ, ಕೃಷಿಯತ್ತ ಮುಖ ಮಾಡುತ್ತಿಲ್ಲ. ಹೀಗಾಗಿಯೇ ಅದೆಷ್ಟೋ ಲಕ್ಷಾಂತರ ಎಕರೆ ಜಮೀನುಗಳು ಪಾಳು ಬಿದ್ದಿವೆ. ಇದೇ ಪರಿಸ್ಥಿತಿ ಈಗ ದಕ್ಷಿಣ ಕನ್ನಡ ಜಿಲ್ಲೆಗೂ ಆಗಿದೆ. ಆದರೆ ಇನ್ನು ಮುಂದೆ ಇದಕ್ಕೆ ಅವಕಾಶ ನೀಡೋದು ಬೇಡ ಎಂದು ಸಂಸದ ನಳಿನ್ ಕುಮಾರ್ ಹೇಳಿದರು.
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ನಗರದ ಹೊರವಲಯದ ನೈತ್ತಾಡಿಯ ಬಾಳೆಗದ್ದೆ ಗೋಪಾಲಕೃಷ್ಣ ಭಟ್ ಎಂಬವರ ಹಡಿಲು ಗದ್ದೆಯನ್ನು ಪುತ್ತೂರು ದೇಗುಲದ ವತಿಯಿಂದ ಬೇಸಾಯ ಮಾಡಲು ನಿರ್ಧರಿಸಲಾಗಿದ್ದು, ಮಂಗಳವಾರ ಬೆಳಗ್ಗೆ ಸಂಸದ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಿದರು.
ನಂತರ ಈ ಕುರಿತು ಮಾತನಾಡಿದ ಸಂಸದರು, ಈ ಹಿಂದೆ ಭತ್ತದ ಬೇಸಾಯವನ್ನು ವ್ಯವಹಾರಕ್ಕಾಗಿ ಮಾಡುತ್ತಿರಲಿಲ್ಲ. ಅದು ನಮ್ಮ ಸಂಸ್ಕೃತಿಯ ಭಾಗವಾಗಿತ್ತು. ಇತ್ತೀಚೆಗೆ ಕರಾವಳಿಯ ಜನ ಅಡಕೆ ಮುಂತಾದ ವಾಣಿಜ್ಯ ಬೆಳೆಗಳತ್ತ ಹೆಚ್ಚು ಆಕರ್ಷಣೆ ತೋರಿಸಿದ ಕಾರಣ, ಇಲ್ಲಿಯೂ ಹಡಿಲು ಗದ್ದೆಗಳ ಪ್ರಮಾಣ ಹೆಚ್ಚಾಯಿತು. ಇಂಥ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕರೆಯಂತೆ ಹಡಿಲು ಗದ್ದೆಗಳ ಬೇಸಾಯ ನಡೆಯುತ್ತಿದ್ದು, ನಮ್ಮ ಆಹಾರವನ್ನು ನಾವೇ ಉತ್ಪಾದಿಸುವ ಪ್ರಕ್ರಿಯೆಗೆ ಇದು ಪ್ರೇರಣೆಯಾಗಲಿ ಎಂದು ಆಶಿಸಿದ್ದಾರೆ.
ಪುತ್ತೂರು ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಮುಳಿಯ ಕೇಶವ ಪ್ರಸಾದ್,ಪುತ್ತೂರು ದೇಗುಲದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಐತ್ತಪ್ಪ ನಾಯ್ಕ್, ಶೇಖರ್ ನಾರಾವಿ, ರಾಮಚಂದ್ರ ಕಾಮತ್, ರಾಮದಾಸ್ ಗೌಡ, ಬಳ್ಳಮಜಲ್ ರವೀಂದ್ರನಾಥ ರೈ, ಡಾ. ಸುಧಾ ಎಸ್. ರಾವ್, ವೀಣಾ, ದೇವಳದ ಪ್ರಧಾನ ಅರ್ಚಕರಾದ ವಿ.ಎಸ್. ಭಟ್, ವಸಂತ ಕೆದಿಲಾಯ ಮತ್ತಿತರರು ಉಪಸ್ಥಿತರಿದ್ದರು. ಹಿರಿಯ ಕೃಷಿಕರಾದ ಪರಮೇಶ್ವರ ನಾಯ್ಕ್ ಅವರನ್ನು ಈ ಸಂದರ್ಭದಲ್ಲಿ ಶಾಲು ಹೊದಿಸಿ ಗೌರವಿಸಲಾಯಿತು.
ಇದನ್ನೂ ಓದಿ: ಒಂದು ಹೆಣ್ಣು ಆಗಿ ಈ ರೀತಿ ಮಾಡೋಕೆ ಎಷ್ಟು ಧೈರ್ಯ?: ನಟ ದರ್ಶನ್