ಮಂಗಳೂರು : ಕರ್ನಾಟಕದ ಏಕೈಕ ಹೈಡ್ರೋಕಾರ್ಬನ್ ಸಂಸ್ಕರಣಾಗಾರ ಎಂಆರ್‌ಪಿಎಲ್( Mangalore Refinery and Petrochemicals Limited )ನಲ್ಲಿ ಉತ್ಪಾದಿಸಲಾದ ಡೀಸೆಲ್ ಇನ್ನು ಮುಂದೆ ಪ್ರತಿದಿನ ಲಕ್ಷಾಂತರ ಪ್ರಯಾಣಿಕರನ್ನು ಸಾಗಿಸುವ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳಿಗೂ ಪೂರೈಕೆಯಾಗಲಿದೆ.
ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳು ನಮ್ಮ ರಾಜ್ಯದ ಮತ್ತು ಹೊರ ರಾಜ್ಯದೆಲ್ಲೆಡೆ ಸಂಚರಿಸುತ್ತವೆ. ಈ ಎಲ್ಲ ಬಸ್‌ಗಳಿಗೆ ಡೀಸೆಲ್ ಸರಬರಾಜುದಾರರಾಗಿದ್ದ ಹೆಚ್‌ಪಿಸಿಎಲ್ ಈಗ ಮಂಗಳೂರು ಸಂಸ್ಕರಣಾಗಾರದಿಂದ ಈ ಎಲ್ಲ ಬಸ್‌ಗಳಿಗೆ ಇಂಧನ ಪೂರೈಸಲಿದೆ. ಪ್ರಸ್ತುತ, ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳಿಗೆ ಡೀಸೆಲ್ ಪೂರೈಸುವ ಟೆಂಡರ್‌ನ ಹೆಚ್‌ಪಿಸಿಎಲ್ ನಿರ್ವಹಿಸುತ್ತಿದೆ.
ಈ ಸಂಪೂರ್ಣ ಪೂರೈಕೆಗಾಗಿ ಹೆಚ್‌ಪಿಸಿಎಲ್ 2020 ಆಗಸ್ಟ್ 29ರಂದು ಎಂಆರ್‌ಪಿಎಲ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಟೆಂಡರ್ ಅಡಿ ಎಂಆರ್‌ಪಿಎಲ್ ಸಂಸ್ಥೆಯು ಹೆಚ್‌ಪಿಸಿಎಲ್‌ನೊಂದಿಗೆ ಕೆಎಸ್‌ಆರ್‌ಟಿಸಿಗೆ ಮೊದಲ ಲೋಡ್‌ನ ಸೆಪ್ಟೆಂಬರ್ 2ರಂದು ರವಾನಿಸಿದೆ.
ಈ ಬಗ್ಗೆ ಜಿಜಿಎಂ ಮಾರ್ಕೇಟಿಂಗ್ ಸತ್ಯನಾರಾಯಣ ಹೆಚ್ ಸಿ ಮಾತನಾಡಿ, ಈ ಒಡಂಬಡಿಕೆಯು ಕಳೆದ ಹಣಕಾಸು ವರ್ಷದ ನಮ್ಮ ಮಾರಾಟಕ್ಕೆ ಹೋಲಿಸಿದ್ರೆ ಕರ್ನಾಟಕದಲ್ಲಿ ಡೀಸೆಲ್ ನೇರ ಮಾರಾಟವನ್ನು ಕನಿಷ್ಠ 20ಪಟ್ಟು ಹೆಚ್ಚಿಸುತ್ತದೆ. ಎಂಆರ್‌ಪಿಎಲ್ ತನ್ನ ಚಿಲ್ಲರೆ ಮಾರಾಟ ಜಾಲವನ್ನು ಕರ್ನಾಟಕ ಮತ್ತು ಕೇರಳದಲ್ಲಿ ವಿಸ್ತರಿಸುತ್ತಿದೆ. ಅನೇಕ ಚಿಲ್ಲರೆ ಮಾರಾಟ ಮಳಿಗೆಗಳ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ ಎಂದರು.